×
Ad

'ಅಮೆಝಾನ್ ಕಾಡಿಗೆ ಬೆಂಕಿ ಹಚ್ಚಲು ಈ ಪ್ರಸಿದ್ಧ ನಟ ಹಣ ನೀಡಿದ್ದಾರೆ'

Update: 2019-11-30 16:35 IST
ಸಾಂದರ್ಭಿಕ ಚಿತ್ರ

ಸಾವೋ ಪೌಲೊ: ಇತ್ತೀಚೆಗೆ ಅಮೆಝಾನ್ ಮಳೆಕಾಡುಗಳಲ್ಲಿ ಸಂಭವಿಸಿದ ಭಾರೀ ಕಾಡ್ಗಿಚ್ಚಿನಿಂದ ಉದ್ಭವಿಸಿದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿರುವ ಹಾಲಿವುಡ್ ನಟ ಲಿಯೊನಾರ್ಡೊ ಡಿ ಕಾಪ್ರಿಯೋ ವಿರುದ್ಧ ಗಂಭೀರ ಆರೋಪವನ್ನು ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಹೊರಿಸಿದ್ದಾರೆ.

ಅಮೆಝಾನ್ ಕಾಡ್ಗಿಚ್ಚಿನ ಹಿಂದಿರುವ ಕೆಲವೊಂದು ಸಂಘಟನೆಗಳಿಗೆ 'ಒಂದು ಕಾಲದ ಹಾಲಿವುಡ್' ನಟ ದೇಣಿಗೆ ನೀಡಿದ್ದಾರೆಂದು ಅವರು ಆರೋಪಿಸಿದ್ದಾರೆ.

"ಡಿ ಕಾಪ್ರಿಯೋ ಈಸ್ ಎ ಕೂಲ್ ಗೈ ಈಸನ್ಟ್ ಹೀ ?, ಗಿವಿಂಗ್ ಮನಿ ಟು ಸೆಟ್ ದಿ ಅಮೆಝಾನ್ ಆನ್ ಫಯರ್'' (ಡಿ ಕಾಪ್ರಿಯೋ ಒಬ್ಬ ಕೂಲ್ ವ್ಯಕ್ತಿ ಅಲ್ಲವೇನು ? ಅಮೆಝಾನ್ ಅರಣ್ಯಕ್ಕೆ ಬೆಂಕಿ ಹಚ್ಚಲು ಹಣ ನೀಡಿದ್ದಾರೆ'' ಎಂದು  ಬ್ರೆಝಿಲ್ ಅಧ್ಯಕ್ಷ ಹೇಳಿದ್ದಾರೆ.

(ಲಿಯೊನಾರ್ಡೊ ಡಿ ಕಾಪ್ರಿಯೋ)

ಈ ವರ್ಷದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕಾಡ್ಗಿಚ್ಚಿನಿಂದ ಹಾನಿ ಸಂಭವಿಸಿದ ಅಮೆಝಾನ್ ಕಾಡುಗಳಿಗೆ ಡಿ ಕಾಪ್ರಿಯೋ ಅವರ ಪರಿಸರ ಸಂಘಟನೆ  5 ಮಿಲಿಯನ್ ಡಾಲರ್ ನೀಡುವುದಾಗಿ ಘೋಷಿಸಿತ್ತು. ಅಮೆಝಾನ್ ನ ಪರ ಎಂಬ ರಾಜ್ಯದಲ್ಲಿ ಎರಡು ಸಂಘಟನೆಗಳ ಮುಖ್ಯ ಕಾರ್ಯಾಲಯಗಳ ಮೇಲೆ ಪೊಲೀಸ್ ದಾಳಿ ನಡೆದ ನಂತರ ಬೊಲ್ಸೊನಾರೊ ಅವರ ಪ್ರತಿಕ್ರಿಯೆ ಬಂದಿದೆ.

ಹಲವಾರು ಸ್ವಯಂಸೇವಕ ಅಗ್ನಿಶಾಮಕರು ತಾವೇನೂ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡರೂ ಅವರನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿದೆ. ಅವರು ಕಾಡಿಗೆ ಉಂಟಾದ ಹಾನಿಗಾಗಿ ಪರಿಹಾರ ಪಡೆಯುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆಂಬ ಆರೋಪದ ಕುರಿತಂತೆ ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News