×
Ad

ಸಂಸತ್ ಕಲಾಪದ ನಡುವೆ ಪ್ರಿಯತಮೆಗೆ ಪ್ರಪೋಸ್ ಮಾಡಿದ ಸಂಸದ !

Update: 2019-11-30 16:53 IST

ರೋಮ್: ಇಟಲಿಯ ಲೀಗ್ ಪಕ್ಷದ 33 ವರ್ಷದ ಸಂಸದ ಫ್ಲಾವಿಯೋ ಡಿ ಮುರೋ ಗುರುವಾರ ಸಂಸತ್ ಅಧಿವೇಶನ ನಡೆಯುತ್ತಿರುವಂತೆಯೇ ಸಾರ್ವಜನಿಕರಿಗಾಗಿನ ಗ್ಯಾಲರಿಯಲ್ಲಿ ಕುಳಿತಿದ್ದ ತಮ್ಮ ಪ್ರಿಯತಮೆಗೆ ಪ್ರಪೋಸ್ ಮಾಡಿದ  ಘಟನೆ ನಡೆದಿದೆ.

ಸಂಸತ್ತಿನಲ್ಲಿ ಚರ್ಚೆಯೊಂದರಲ್ಲಿ ಭಾಗವಹಿಸುತ್ತಿದ್ದ ಮುರೋ  ಅರೆಕ್ಷಣದಲ್ಲಿ ತಮ್ಮ ಸೀಟಿನ ಕೆಳಗೆ ತಾವಿರಿಸಿದ್ದ ಉಂಗುರ ಹೊರತೆಗೆದು ನನ್ನನ್ನು ವಿವಾಹವಾಗುತ್ತೀಯಾ ಎಂದು ತಮ್ಮ ಪ್ರಿಯತಮೆ ಎಲಿಸಾ ಡಿ ಲಿಯೋ ಅವರಿಗೆ ಪ್ರಪೋಸ್ ಮಾಡಿಯೇ ಬಿಟ್ಟರು.

ಆ ಕ್ಷಣ ಅವರ ಬಳಿಯಿದ್ದ ಒಬ್ಬ ಸಂಸದ ಮೊಬೈಲ್ ಫೋನ್ ಲೋಕದಲ್ಲಿ ಮುಳುಗಿದ್ದರೆ ಇನ್ನಿಬ್ಬರು ಎದ್ದು ನಿಂತು ಕರತಾಡನ ಮಾಡಿದರು. ಈ ವಿದ್ಯಮಾನದ ವೀಡಿಯೋದಲ್ಲಿ ಮುರೋ ಮಾತನಾಡುತ್ತಿರುವುದು ಕಾಣಿಸುತ್ತದೆ.

"ಇಂದು ನನಗೆ ಇತರ ದಿನಗಳಂತಲ್ಲ, ಇಂದು ವಿಶೇಷ ದಿನ,'' ಎಂದು ಪೀಠಿಕೆ ಹಾಕುತ್ತಾ ತಮ್ಮ ಕುರ್ಚಿಯ ಅಡಿಯಲ್ಲಿನ ಉಂಗುರದ ಪೆಟ್ಟಿಗೆಯನ್ನು ಹೊರತೆಗೆದು ಲಿಯೋ ಅವರತ್ತ ಚಾಚಿ - ``ನಾನು ಗ್ಯಾಲರಿಯತ್ತ ನೋಡಿ ಮಾತನಾಡುತ್ತಿದ್ದೇನೆ ಎಲಿಸಾ ನನ್ನನ್ನು ವಿವಾಹವಾಗುತ್ತೀಯಾ?'' ಎಂದರು.

ಆ ಕ್ಷಣ ಸ್ಪೀಕರ್ ಈ ಬೆಳವಣಿಗೆಯಿಂದ ಅಸಮಾಧಾನಗೊಂಡು  ``ನಿಮ್ಮನ್ನು ನಾನು ಅರ್ಥೈಸಬಲ್ಲೆ ಆದರೆ ಈ ರೀತಿ ಇಲ್ಲಿ ಮಾಡುವುದು ಸೂಕ್ತವಲ್ಲ'' ಎಂದರು.

ಮುರೋ ಹಾಗೂ ಎಲಿಸಾ ಕಳೆದ ಆರು ವರ್ಷಗಳಿಂದ ಜತೆಯಾಗಿ ವಾಸಿಸುತ್ತಿದ್ದಾರೆ. ಆಕೆ ನನಗೆ ವೈಯಕ್ತಿಕವಾಗಿ, ರಾಜಕೀಯವಾಗಿ ಅತ್ಯಂತ ನಿಕಟವಾಗಿರುವುದರಿಂದ ಆಕೆಗೆ ಸಂಸತ್ತಿನಲ್ಲಿ ಪ್ರಪೋಸ್ ಮಾಡಿದ್ದರಲ್ಲಿ ತಪ್ಪೇನಿಲ್ಲ ಎಂದು ಮುರೋ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News