ಮ್ಯಾಕ್ರೋನ್‌ರ ಮೆದುಳು ಸತ್ತಿದೆ: ನ್ಯಾಟೊ ಶೃಂಗ ಸಮ್ಮೇಳನಕ್ಕೆ ಮುನ್ನ ಟರ್ಕಿ ಅಧ್ಯಕ್ಷರ ಹೇಳಿಕೆ

Update: 2019-11-30 14:56 GMT

ಇಸ್ತಾಂಬುಲ್ (ಟರ್ಕಿ), ನ. 30: ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೊ) ಸಾಯುತ್ತಿದೆ ಎಂಬುದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ನೀಡಿರುವ ಎಚ್ಚರಿಕೆಯು ‘ರೋಗಗ್ರಸ್ತ ಮತ್ತು ಹಗುರ’ ತಿಳುವಳಿಕೆಯನ್ನು ತೋರಿಸುತ್ತದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ. ‘‘ನಿಮ್ಮ ಮೆದುಳು ಸತ್ತಿದೆಯೇ ಎನ್ನುವುದನ್ನು ನೀವು ತಪಾಸಣೆ ಮಾಡಬೇಕು’’ ಎಂದು ಅವರು ಫ್ರಾನ್ಸ್ ಅಧ್ಯಕ್ಷರಿಗೆ ಸೂಚಿಸಿದ್ದಾರೆ.

ಈ ಹೇಳಿಕೆಗೆ ತಕ್ಷಣ ಫ್ರಾನ್ಸ್‌ನ ವಿದೇಶ ಸಚಿವಾಲಯವು ಆಕ್ಷೇಪ ವ್ಯಕ್ತಪಡಿಸಿದೆ ಹಾಗೂ ಇದು ಫ್ರಾನ್ಸ್ ಅಧ್ಯಕ್ಷರಿಗೆ ಮಾಡಿದ ಅವಮಾನ ಎಂದಿದೆ. ಪ್ಯಾರಿಸ್‌ನಲ್ಲಿರುವ ಟರ್ಕಿ ರಾಯಭಾರಿಯನ್ನು ಕರೆಸಿಕೊಂಡ ಸಚಿವಾಲಯವು ಈ ಬಗ್ಗೆ ಪ್ರತಿಭಟನೆ ಸಲ್ಲಿಸಿತು.

ನ್ಯಾಟೊ ಉತ್ತರ ಅಮೆರಿಕ ಮತ್ತು ಯುರೋಪ್‌ನ 29 ದೇಶಗಳ ಸೇನಾ ಮಿತ್ರಕೂಟವಾಗಿದೆ. 1949 ಎಪ್ರಿಲ್ 4ರಂದು ಜಾರಿಗೆ ಬಂದ ಒಪ್ಪಂದದ ಪ್ರಕಾರ, ಸಂಘಟನೆಯ ಯಾವುದೇ ಸದಸ್ಯ ದೇಶದ ಮೇಲೆ ಸಂಘಟನೆಗೆ ಹೊರತಾದ ಯಾವುದೇ ದೇಶವು ದಾಳಿ ನಡೆಸಿದರೆ, ಸಂತ್ರಸ್ತ ದೇಶದ ಕೋರಿಕೆಯ ಮೇರೆಗೆ ಇತರ ಸದಸ್ಯ ದೇಶಗಳು ಆ ದೇಶದ ರಕ್ಷಣೆಗೆ ಧಾವಿಸಬೇಕಾಗುತ್ತದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಿಯಲ್ಲಿ ಅಮೆರಿಕದ ಅನಿಶ್ಚಿತ ನಿಲುವು ಹಾಗೂ ಟರ್ಕಿಯೊಂದಿಗೆ ಹಳಸಿದ ಸಂಬಂಧದ ಹಿನ್ನೆಲೆಯಲ್ಲಿ, ನ್ಯಾಟೊದ ಮೆದುಳು ಸತ್ತಿದೆ ಎಂಬುದಾಗಿ ಮ್ಯಾಕ್ರೋನ್ ಹೇಳಿದ್ದರು.

ಬ್ರಿಟನ್‌ನಲ್ಲಿ ಡಿಸೆಂಬರ್ 4ರಂದು ನಡೆಯಲಿರುವ ನ್ಯಾಟೊ ಶೃಂಗ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಈ ಬೆಳವಣಿಗೆಗಳು ನಡೆದಿವೆ.

‘‘ನಾನು ಟರ್ಕಿಯಿಂದ ಮ್ಯಾಕ್ರೋನ್‌ರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ನಾನು ನ್ಯಾಟೊ ಶೃಂಗ ಸಮ್ಮೇಳನದಲ್ಲೂ ಹೇಳಲಿದ್ದೇನೆ: ನಿಮ್ಮ ಮೆದುಳು ಸತ್ತಿದೆಯೇ ಎನ್ನುವುದನ್ನು ನೀವು ಮೊದಲು ತಪಾಸಣೆ ಮಾಡಿ’’ ಎಂದು ಎರ್ದೊಗಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News