×
Ad

ಮಾಲ್ಟ: ರಾಜೀನಾಮೆ ನೀಡಲು ಪ್ರಧಾನಿ ಇಂಗಿತ?

Update: 2019-11-30 21:04 IST

ವ್ಯಾಲೆಟ (ಮಾಲ್ಟ), ನ. 30: ಮಾಲ್ಟದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಪತ್ರಕರ್ತೆಯೊಬ್ಬರ ಹತ್ಯೆಯ ಬಳಿಕ ಉಂಟಾಗಿರುವ ರಾಜಕೀಯ ಮತ್ತು ಕಾನೂನು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತಾನು ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ ಎಂದು ಆ ದೇಶದ ಪ್ರಧಾನಿ ಜೋಸೆಫ್ ಮಸ್ಕಟ್ ತನ್ನ ಸಂಗಡಿಗರಿಗೆ ತಿಳಿಸಿದ್ದಾರೆ ಎಂದು ‘ಟೈಮ್ಸ್ ಆಫ್ ಮಾಲ್ಟ’ ಶುಕ್ರವಾರ ವರದಿ ಮಾಡಿದೆ.

ಆದರೆ, ಪ್ರಧಾನಿಯ ವಕ್ತಾರರು ವರದಿಯನ್ನು ಖಚಿತವೂ ಪಡಿಸಿಲ್ಲ, ನಿರಾಕರಿಸಲೂ ಇಲ್ಲ. ಪ್ರಧಾನಿ ಮಸ್ಕಟ್ ಮಾತಾಡಬೇಕಾಗಿದ್ದ ರವಿವಾರದ ಕಾರ್ಯಕ್ರಮವೊಂದನ್ನು ಅವರ ಲೇಬರ್ ಪಕ್ಷ ರದ್ದುಪಡಿಸಿದೆ.

ಸರಕಾರದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದ ಪತ್ರಕರ್ತೆ ಕರುವಾನ ಗಲೀಝಿಯ 2017 ಅಕ್ಟೋಬರ್ 16ರಂದು ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದರು.

ಈ ಹತ್ಯೆಯಲ್ಲಿ ಪ್ರಧಾನಿ ಜೋಸೆಫ್ ಮಸ್ಕಟ್‌ರ ಹೆಸರು ಬಲವಾಗಿ ಕೇಳಿಬಂದಿತ್ತು. ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ ಅವರ ಬಲಗೈ ಬಂಟ ಅಧಿಕಾರಿಯೊಬ್ಬನನ್ನು ರಾತ್ರೋರಾತ್ರಿ ಬಿಡುಗಡೆ ಮಾಡಿದ ಬಳಿಕ, ಮಸ್ಕಟ್ ರಾಜೀನಾಮೆ ನೀಡಬೇಕೆಂದು ಪತ್ರಕರ್ತೆಯ ಕುಟುಂಬ ಶುಕ್ರವಾರ ಒತ್ತಾಯಿಸಿದೆ.

ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಸ್ಕಟ್‌ರ ಸೇನಾ ಮುಖ್ಯಸ್ಥ ಮತ್ತು ಇಬ್ಬರು ಸಂಪುಟ ಸದಸ್ಯರು ಈ ವಾರ ಅಧಿಕಾರದಿಂದ ಕೆಳಗಿಳಿದಿದ್ದಾರೆ.

ಪತ್ರಕರ್ತೆಯ ಕಾರಿನಲ್ಲಿ ಬಾಂಬ್ ಇಟ್ಟಿದ್ದ ಆರೋಪದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆದರೆ, ಅವರನ್ನು ಈ ಕೆಲಸಕ್ಕೆ ನಿಯೋಜಿಸಿದ ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News