×
Ad

ಟ್ರಂಪ್ ಬ್ರಿಟನ್ ಚುನಾವಣೆಯಲ್ಲಿ ತಲೆಹಾಕದಿದ್ದರೆ ಒಳ್ಳೆಯದು: ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್

Update: 2019-11-30 21:08 IST

ಲಂಡನ್, ನ. 30: ಮುಂದಿನ ವಾರ ನಡೆಯಲಿರುವ ನ್ಯಾಟೋ ಸಮ್ಮೇಳನಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲಂಡನ್‌ಗೆ ಬರುವಾಗ ಬ್ರಿಟನ್‌ನ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸದಿದ್ದರೆ ಒಳ್ಳೆಯದು ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಶುಕ್ರವಾರ ಹೇಳಿದ್ದಾರೆ.

ಪ್ರತಿಪಕ್ಷ ಲೇಬರ್ ಪಾರ್ಟಿ ನಾಯಕ ಜೆರೆಮಿ ಕಾರ್ಬಿನ್ ಬ್ರಿಟನ್‌ಗೆ ‘ತುಂಬಾ ಕೆಟ್ಟವರು’ ಹಾಗೂ ಬ್ರೆಕ್ಸಿಟ್ ಪಾರ್ಟಿ ನಾಯಕ ನೈಜಲ್ ಫರಾಜ್ ಜೊತೆಗೆ ಜಾನ್ಸನ್ ತಿಳುವಳಿಕೆಯೊಂದಕ್ಕೆ ಬರಬೇಕು ಎಂಬುದಾಗಿ ಟ್ರಂಪ್ ಅಕ್ಟೋಬರ್‌ನಲ್ಲಿ ಹೇಳಿದ್ದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು, ಟ್ರಂಪ್ ಇನ್ನೊಮ್ಮೆ ಇತರ ದೇಶಗಳ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸುತ್ತಾರೆ ಎಂದು ಹೇಳಿದ್ದಾರೆ.

 ಆದರೆ, ಡಿಸೆಂಬರ್ 12ರ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವಾಗ ಟ್ರಂಪ್ ಏನಾದರೂ ಹೇಳಿ ಅವಾಂತರ ಸೃಷ್ಟಿಸಬಹುದು ಎಂಬ ಭೀತಿಯನ್ನು ಬ್ರಿಟನ್ ಪ್ರಧಾನಿಯ ಕನ್ಸರ್ವೇಟಿವ್ಸ್ ಪಕ್ಷ ವ್ಯಕ್ತಪಡಿಸಿದೆ.

ಈ ಚುನಾವಣೆಯಲ್ಲಿ ಜಾನ್ಸನ್ ವಿಜಯಿಯಾಗಬಹುದು ಎಂಬ ಇಂಗಿತವನ್ನು ಅಭಿಪ್ರಾಯ ಸಂಗ್ರಹಣೆಗಳು ತಿಳಿಸಿವೆ.

‘‘ಮಿತ್ರ ದೇಶಗಳಾಗಿ ಹಾಗೂ ಸ್ನೇಹಿತರಾಗಿ ನಾವು ಪಾರಂಪರಿಕವಾಗಿ ಮಾಡಿಕೊಂಡು ಬಂದಿದ್ದೇನೆಂದರೆ- ಪರಸ್ಪರರ ಚುನಾವಣೆಗಳಲ್ಲಿ ಹಸ್ತಕ್ಷೇಪ ನಡೆಸದಿರುವುದು’’ ಎಂದು ಎಲ್‌ಬಿಸಿ ರೇಡಿಯೊಗೆ ನೀಡಿದ ಸಂದರ್ಶನವೊಂದರಲ್ಲಿ ಜಾನ್ಸನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News