ಅಸ್ಸಾಂನಲ್ಲಿ ನಾಗರಿಕತ್ವ ಸಾಬೀತುಪಡಿಸಲು 1.6 ಲಕ್ಷ ಜನರಿಂದ ಹೋರಾಟ

Update: 2019-12-01 06:30 GMT

ಗುವಾಹಟಿ, ನ. 30: ಅಸ್ಸಾಮಿನಾದ್ಯಂತ ತಮ್ಮ ಭಾರತೀಯ ನಾಗರಿಕತ್ವ ಸಾಬೀತುಪಡಿಸಲು ವಿದೇಶಿಗರ ನ್ಯಾಯಾಧಿಕರಣದಲ್ಲಿ 1.6 ಲಕ್ಷ ಜನರು ಹೋರಾಡುತ್ತಿದ್ದಾರೆ ಎಂದು ರಾಜ್ಯ ವಿಧಾನ ಸಭೆಗೆ ಶನಿವಾರ ಮಾಹಿತಿ ನೀಡಲಾಯಿತು.

ಎಐಯುಡಿಎಫ್ ಶಾಸಕ ರಫೀಕುಲ್ ಇಸ್ಲಾಂ ಅವರ ಪ್ರಶ್ನೆಗೆ ಅಸ್ಸಾಂನ ಸಂಸದೀಯ ವ್ಯವಹಾರಗಳ ಸಚಿವ ಚಂದ್ರ ಮೋಹನ್ ಪಟೌರಿ ಲಿಖಿತ ಪ್ರತಿಕ್ರಿಯೆ ನೀಡಿ, ವಿದೇಶಿಗರ ನ್ಯಾಯಾಧಿಕರಣದಲ್ಲಿ 2019 ಮೇ 31ರ ವರೆಗೆ 1,58,554 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ವಿದೇಶಿಯರೆಂದು ಘೋಷಿಸಲಾದ ಎಲ್ಲ ಆದೇಶಗಳ ಪೈಕಿ 1,31,459 ಪ್ರಕರಣಗಳಲ್ಲಿ ಆರೋಪಿಗಳು ವಾದಿಸುತ್ತಿದ್ದಾರೆ. 68,789 ಪ್ರಕರಣಗಳಲ್ಲಿ ತೀರ್ಪನ್ನು ಏಕಪಕ್ಷೀಯವಾಗಿ ನೀಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಲಾಯಿತು.

ಗೃಹ ಖಾತೆ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಪರವಾಗಿ ಪ್ರತಿಕ್ರಿಯೆ ನೀಡಿದ ಪಟೌರಿ, ಅಸ್ಸಾಂನಲ್ಲಿ ಸದ್ಯ 1,13,738 ಡಿ ಮತದಾರರು (ಅನುಮಾನಾಸ್ಪದ ಮತದಾರರು) ಇದ್ದಾರೆ. ವಿದೇಶಿಗರ ನ್ಯಾಯಾಧಿಕರಣ ನೀಡಿದ ಆದೇಶಕ್ಕೆ ಅನುಗುಣವಾಗಿ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ರಾಜ್ಯಾದ್ಯಂತದ ವಿದೇಶಿಗರ ನ್ಯಾಯಾಧಿಕರಣದಲ್ಲಿ ಇತ್ತೀಚೆಗೆ 221ಕ್ಕೂ ಅಧಿಕ ಸದಸ್ಯರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News