ರಕ್ಷಣಾ ಪ್ರದರ್ಶನ: 64 ಸಾವಿರ ಮರಗಳನ್ನು ಧರೆಗುರುಳಿಸಲು ಆದಿತ್ಯನಾಥ್ ಸರಕಾರ ನಿರ್ಧಾರ

Update: 2019-11-30 17:58 GMT

ಹೊಸದಿಲ್ಲಿ, ಸೆ. 30: ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ರಕ್ಷಣಾ ಪ್ರದರ್ಶನ ‘ಡಿಫೆನ್ಸ್ ಎಕ್ಸ್‌ಪೋ’ಗೆ ಲಕ್ನೋದ ಗೋಮತಿ ನದಿಯುದ್ದಕ್ಕೂ ಇರುವ 63,799 ಮರಗಳನ್ನು ಧರೆಗುರುಳಿಸಲು ಉತ್ತರ ಪ್ರದೇಶ ಸರಕಾರ ಸಿದ್ಧತೆ ನಡೆಸುತ್ತಿದೆ.

ದೇಶದ ರಕ್ಷಣಾ ಶಕ್ತಿಗೆ ಸಾಕ್ಷಿಯಾಗಲು ಹಲವು ದೇಶಗಳ ಅತಿಥಿಗಳನ್ನು ಆಹ್ವಾನಿಸಲಾಗುವ ‘ಡಿಫೆನ್ಸ್ ಎಕ್ಸ್‌ಪೋ’ ಇಲ್ಲಿ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಹನಾಮಾನ್ ಸೇತುವಿನಿಂದ ನಿಶತ್‌ಗಂಜ್ ಸೇತುವೆ ವರೆಗೆ ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ಲಕ್ನೋ ಅಭಿವೃದ್ಧಿ ಪ್ರಾಧಿಕಾರ (ಎಲ್‌ಡಿಎ) ಲಕ್ನೋ ನಗರ್ ನಿಗಮ್‌ಗೆ ಬರೆದ ಪತ್ರದಲ್ಲಿ ಮನವಿ ಮಾಡಿದೆ.

15 ಜನವರಿ 2020ರ ಒಳಗೆ ಈ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಹಾಗೂ ತೆರವುಗೊಂಡ ಪ್ರದೇಶವನ್ನು ಕಾರ್ಯಕ್ರಮ ನಡೆಸಲಿರುವ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್‌ಎಎಲ್)ಗೆ ವರ್ಗಾಯಿಸಲು ಲಕ್ನೋ ಅಭಿವೃದ್ಧಿ ಪ್ರಾಧಿಕಾರ (ಎಲ್‌ಡಿಎ) ಬಯಸಿದೆ.

‘ಡಿಫೆನ್ಸ್ ಎಕ್ಸ್‌ಪೋ’ ಮುಗಿದ ಬಳಿಕ ಹೊಸ ಗಿಡಗಳನ್ನು ನೆಡಲಾಗುವುದು ಹಾಗೂ ತೆಗೆಯಲಾದ ಮರಗಳನ್ನು ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಲಕ್ನೋ ಅಭಿವೃದ್ಧಿ ಪ್ರಾಧಿಕಾರ (ಎಲ್‌ಡಿಎ) ಹೇಳಿದೆ. ಹೊಸ ಗಿಡಗಳನ್ನು ನೆಡಲು ನಗರ ನಿಗಮದಿಂದ 59 ಲಕ್ಷ ರೂಪಾಯಿ ನೀಡುವಂತೆ ಕೂಡ ಲಕ್ನೋ ಅಭಿವೃದ್ಧಿ ಪ್ರಾಧಿಕಾರ (ಎಲ್‌ಡಿಎ) ಕೋರಿದೆ. ಗೋಮತಿ ನದಿಯ ಉದ್ದಕ್ಕೂ ಗಿಡಗಳನ್ನು ನೆಡಲು ಪ್ರಾಧಿಕಾರ 59.06 ಲಕ್ಷ ರೂಪಾಯಿ ವೆಚ್ಚ ಮಾಡಲಿದೆ ಎಂದು ಎಂದು ಎಲ್‌ಡಿಎ ಕಾರ್ಯದರ್ಶಿ ಹೇಳಿದ್ದಾರೆ.

ಆದರೆ, ಈ ಋತುಮಾನದಲ್ಲಿ ಮರ ಹಾಗೂ ಗಿಡಗಳ ಸ್ಥಳಾಂತರ ಅಸಾಧ್ಯ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ‘‘ಸ್ಥಳಾಂತರಿಸಿದರೆ ಮರಗಳು ಸಾಯುತ್ತವೆ’’ ಎಂದು ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

‘‘ಮುಂದೆ ಚಳಿಗಾಲ ಬರುವುದರಿಂದ ಮರ ಹಾಗೂ ಗಿಡಗಳನ್ನು ಇತರ ಕಡೆ ಸ್ಥಳಾಂತರಿಸುವುದು ಕಷ್ಟಕರ. ಇದರ ಅಂತಿಮ ಫಲಿತಾಂಶ ಮರ ಹಾಗೂ ಗಿಡಗಳು ನಾಶ. ಆದುದರಿಂದ ಇದೇ ಸ್ಥಳಗಳಲ್ಲಿ ಗಿಡಗಳನ್ನು ನೆಡಲು ಹಣದ ಅಗತ್ಯವಿದೆ. ಅದಕ್ಕಾಗಿ ಮುನ್ಸಿಪಲ್ ಕಮಿಷನ್ ಅವರಿಗೆ ಈ ವಿಷಯದಲ್ಲಿ ಪತ್ರ ಬರೆಯಬೇಕಾಯಿತು’’ ಎಂದು ಲಕ್ನೋ ಅಭಿವೃದ್ಧಿ ಪ್ರಾಧಿಕಾರ (ಎಲ್‌ಡಿಎ) ಕಾರ್ಯದರ್ಶಿ ಎಂ.ಪಿ. ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News