ಫಾಸ್ಟ್ ಟ್ಯಾಗ್ ಕಡ್ಡಾಯ ವಿರೋಧಿಸಿ ತಲಪಾಡಿ ಟೋಲ್ ಗೇಟ್ ಎದುರು ಪ್ರತಿಭಟನೆ

Update: 2019-12-01 11:02 GMT

ಉಳ್ಳಾಲ : ಫಾಸ್ಟ್ ಟ್ಯಾಗ್  ಕಡ್ಡಾಯ ಜಾರಿಗೊಳಿಸುವ ಮೂಲಕ ಜನರ ಮೇಲೆ ದಬ್ಬಾಳಿಕೆಯನ್ನು ಮಾಡಲು ಸರಕಾರ ಮುಂದಾಗಿದೆ. ಬೇಡಿಕೆಗಳನ್ನು ಈಡೇರಿಸದೇ  ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದಲ್ಲಿ ಅನಿರ್ದಿಷ್ಟ ಹೋರಾಟ ಮಾಡಲಾಗುವುದು ಈ ವಿಚಾರದಲ್ಲಿ ಜೈಲಿಗೆ ಹಾಕಿದರೂ  ಹೋರಾಟ ಬಿಡುವುದಿಲ್ಲ ಎಂದು ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಹೇಳಿದ್ದಾರೆ.

ಸ್ವನಿಯಂತ್ರಿತ (ಫಾಸ್ಟ್ ಟ್ಯಾಗ್ ) ಪದ್ಧತಿ ಜಾರಿ ಹಾಗೂ ಈ ಮೂಲಕ ಟೋಲ್ ಶುಲ್ಕ  ಕಡ್ಡಾಯಗೊಳಿಸಿರುವುದರನ್ನು ವಿರೋಧಿಸಿ  ಕಡ್ಡಾಯ ನಿಯಮವನ್ನು  ಸಡಿಲಗೊಳಿಸಬೇಕು  ಎಂದು ಒತ್ತಾಯಿಸಿ ತಲಪಾಡಿ ಟೋಲ್ ಗೇಟ್ ಎದುರು ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶಾದ್ಯಂತ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ಮೂಲಕ ವಿಶ್ವ ದರ್ಜೆಗೆ ಏರಿಸುವ ಪ್ರಯತ್ನ ಅನ್ನುತ್ತಿರುವ ಸರಕಾರದ ಹೇಳಿಕೆ  ಮೂರ್ಖತನದ್ದಾಗಿದೆ ಈ ಹಿಂದೆ ಸ್ಥಳೀಯ ವಾಹನಗಳ ವಿನಾಯಿತಿ ಸಿಕ್ಕಿದ್ದು ಕೇವಲ ಹೋರಾಟದಿಂದ ಆಗಿತ್ತು. ಆದರೆ  ರಸ್ತೆಯಿಡೀ ಅವ್ಯವಸ್ಥೆಯಿಂದ ಕೂಡಿದ್ದರೂ, ಸರ್ವಿಸ್ ರಸ್ತೆ ನಿರ್ಮಾಣವಾಗದೇ ಇದ್ದರೂ ಖಾಸಗಿ ಕಂಪೆನಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಫಾಸ್ಟ್ ಟ್ಯಾಗ್ ಜ್ಯಾರಿಗೊಳಿಸಿರುವುದರಲ್ಲಿ ಅರ್ಥವಿಲ್ಲ.  ಸಮಯಕ್ಕೆ ಸರಿಯಾಗಿ ರಾ.ಹೆ 66ರ ಕಾಮಗಾರಿಯನ್ನು  ಪೂರ್ತಿಗೊಳಿಸಲು ಸಾಧ್ಯವಾಗದ ಕಂಪೆನಿ ವಿರುದ್ಧ ದಂಡ ಹಾಕಲು ಯೋಗ್ಯತೆಯಿಲ್ಲದ ರಾ.ಹೆ ಇಲಾಖೆಗೆ ಇಲ್ಲ. ಆಂಬ್ಯುಲೆನ್ಸ್ ವಾಹನಗಳು ಸರತಿ ಸಾಲಿನಲ್ಲಿ  ನಿಂತು ಹೋಗಬೇಕಾರುವುದು ದೌರ್ಬಾಗ್ಯ ಎಂದು ಆರೋಪಿಸಿದ ಅವರು  ಶಾಲಾ ವಾಹನಗಳ ಟೋಲ್ ಪಾವತಿಯನ್ನು ವಿದ್ಯಾರ್ಥಿಗಳ ತಲೆಗೆ ಹಾಕಲಾಗುತ್ತಿದೆ. ಬೇಡಿಕೆಗಳನ್ನು ಈಡೇರಿಸದೇ ಫಾಸ್ಟ್ ಟ್ಯಾಗ್ ಜಾರಿಗೊಳಿಸಿದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸಭೆಯನ್ನು ಮಂಜೇಶ್ವರ ಗ್ರಾಹಕರ ವೇದಿಕೆ ಅಧ್ಯಕ್ಷ ಮುರಳೀಧರ್ ಭಟ್ ಉದ್ಘಾಟಿಸಿದರು. ಬಿಜೆಪಿ ಮುಖಂಡ ಹರಿಶ್ಚಂದ್ರ, ಮುಸ್ಲಿಂ ಯೂತ್ ಲೀಗ್  ಬ್ಲಾಕ್ ಅಧ್ಯಕ್ಷ ಸೈಫುಲ್ಲಾ ತಂಙಳ್,  ಸಿಪಿಎಂನ  ರಝಾಕ್ ಚಿಟ್ಟುಪದವ್, ಎಸ್ ಡಿಪಿಐನ ಅಬ್ದುಲ್ ಹಮೀದ್, ಕುಂಜತ್ತೂರಿನ  ಅರಬ್ ರೈಡರ್ಸ್ ಅಧ್ಯಕ್ಷ  ಯಹ್ಯಾ,  ಕಾಸರಗೋಡು ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ,  ರಝಾಕ್ ಚಕ್ಕೂರು,  ಅಸ್ಲಂ ಕುಂಜತ್ತೂರು, ಜೆಸ್ಸಿ ಹನಿಲ್,  ರಹೀಂ ಉಚ್ಚಿಲ್ ಯುಬಿಎಂ,  ವಿನು ಶೆಟ್ಟಿ ತಲಪಾಡಿ, ಹುಸೈನ್ ತಲಪಾಡಿ, ರೆಹಮಾನ್ ಮೂಡ, ಶಬೀರ್ ಅಬ್ಬಾಸ್  ಭಾಗವಹಿಸಿದ್ದರು. ಟಿ.ಇಸ್ಮಾಯಿಲ್ ತಲಪಾಡಿ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News