ಪತ್ರಕರ್ತರ ಗ್ರಾಮ ವಾಸ್ತವ್ಯ: ಡಿ. 3ರಂದು ಪೂರ್ವಭಾವಿ ಸಭೆ

Update: 2019-12-01 11:46 GMT

ಸುಳ್ಯ: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಹಯೋಗದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಸುಳ್ಯ ತಾಲೂಕಿನ ಮಡಪ್ಪಾಡಿಯಲ್ಲಿ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯಲಿದೆ.

ಈ ಕುರಿತು ಚರ್ಚಿಸಲು ಪೂರ್ವಭಾವಿ ಸಭೆ ಡಿ.3ರಂದು ಬೆಳಿಗ್ಗೆ 10 ಕ್ಕೆ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿದೆ‌. ಶಾಸಕ ಎಸ್‌.ಅಂಗಾರ ಹಾಗು ಇತರ  ಜನಪ್ರತಿನಿಧಿಗಳು, ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಮತ್ತು ಇತರ ಅಧಿಕಾರಿಗಳು, ಪ್ರಮುಖರು, ಪತ್ರಕರ್ತರ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಎರಡನೇ ಗ್ರಾಮ ವಾಸ್ತವ್ಯ

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ವತಿಯಿಂದ ನಡೆಯುವ ಎರಡನೇ ಗ್ರಾಮ ವಾಸ್ತವ್ಯ ಮಡಪ್ಪಾಡಿಯಲ್ಲಿ ನಡೆಯಲಿದೆ. ಕಳೆದ ವರ್ಷ ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆದಿತ್ತು. ಜಿಲ್ಲೆಯ ಮತ್ತು ರಾಜ್ಯದ ಎಲ್ಲಾ ಮಾಧ್ಯಮಗಳ ಪ್ರಮುಖ ಪತ್ರಕರ್ತರು ಆಗಮಿಸಿ ಇಡೀ ದಿನ ಗ್ರಾಮದಲ್ಲಿ ವಾಸ್ತವ್ಯ ನಡೆಸುವರು. ಗ್ರಾಮ ವಾಸ್ತವ್ಯ ನಡೆಸುವ ಗ್ರಾಮ ಮತ್ತು ಸುತ್ತಲ ಗ್ರಾಮಗಳ ಮೂಲಭೂತ ಸಮಸ್ಯೆಗಳ ಮತ್ತು ಜನರು ಎದುರಿಸುವ ಸಮಸ್ಯೆಗಳಗಳನ್ನು ಬಿಂಬಿಸಿ ಅದರ ಪರಿಹಾರಕ್ಕೆ ಶ್ರಮಿಸುವುದರ ಜೊತೆಗೆ  ಆ ಗ್ರಾಮದ ವಿಶೇಷತೆಯೆಡೆಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುತ್ಲೂರಿನಲ್ಲಿ ನಡೆದ ಗ್ರಾಮ ವಾಸ್ತವ್ಯಕ್ಕೆ ಜನರಿಂದ, ಜನಪ್ರತಿನಿಧಿಗಳಿಂದ ಮತ್ತು ಅಧಿಕಾರಿಗಳಿಂದ ಅಭೂತಪೂರ್ವ ಬೆಂಬಲ ದೊರೆತು ಯಶಸ್ವಿಯಾಗಿತ್ತು.

ಗ್ರಾಮ ವಾಸ್ತವ್ಯದಲ್ಲಿ ಏನೆಲ್ಲ ಇರಲಿದೆ ?

ಬೆಳಗ್ಗೆ ಗ್ರಾಮ ವಾಸ್ತವ್ಯದ ಉದ್ಘಾಟನೆ  ನಡೆಯಲಿದೆ. ಬಳಿಕ ಜಿಲ್ಲೆಯ ಎಲ್ಲಾ ಅಧಿಕಾರಿಗಳೊಂದಿಗೆ ಗ್ರಾಮದ ಮೂಲಭೂತ ಹಾಗು ಜನರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಚರ್ಚಾ ಕಾರ್ಯಕ್ರಮ ಇರಲಿದೆ‌.  ಬಳಿಕ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಜೊತೆ ಸಾರ್ವಜನಿಕರ ಮುಖಾಮುಖಿ ನಡೆಯಲಿದೆ. ಬಳಿಕ ಪತ್ರಕರ್ತರು ಮತ್ತು ಗ್ರಾಮದ ಜನರ ಮಧ್ಯೆ ಸಂವಾದ, ಸಂಜೆ ಗ್ರಾಮದ ಹಿರಿಯರೊಂದಿಗೆ ಗ್ರಾಮದ ವಿಶೇಷತೆಗಳ ಬಗ್ಗೆ ಪತ್ರಕರ್ತರ ಚಾವಡಿ ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಪತ್ರಕರ್ತರು ರಾತ್ರಿ ಗ್ರಾಮದಲ್ಲಿಯೇ ವಾಸ್ತವ್ಯ ನಡೆಸುವರು. ಅಲ್ಲದೆ ಸಾರ್ವಜನಿಕರಿಗೆ  ಉಚಿತ ಆರೋಗ್ಯ ತಪಾಸಣಾ ಶಿಬಿರ, ಗ್ರಾಮದ ಪ್ರಮುಖ ಸ್ಥಳಗಳಿಗೆ ಪತ್ರಕರ್ತರ ಭೇಟಿ ಕೂಡ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News