ಮೋದಿ ಸರಕಾರದ ಈ ಕ್ರಮ ‘ದೇಶವಿರೋಧಿ’ ಎಂದ ಆರೆಸ್ಸೆಸ್ ಅಂಗಸಂಸ್ಥೆ

Update: 2019-12-01 17:10 GMT
Photo: PTI

ಹೊಸದಿಲ್ಲಿ, ಡಿ.1: ಸಾರ್ವಜನಿಕ ವಲಯದ ಉದ್ಯಮಗಳಿಂದ ಹೂಡಿಕೆ ಹಿಂದಕ್ಕೆ ಪಡೆಯುವ ನರೇಂದ್ರ ಮೋದಿ ಸರಕಾರದ ಯೋಜನೆ ದೇಶವಿರೋಧಿಯಾಗಿದೆ ಎಂದು ಆರೆಸ್ಸೆಸ್ ಸಂಯೋಜಿತ ಸಂಘಟನೆ ಸ್ವದೇಶಿ ಜಾಗರಣ್ ಮಂಚ್ (ಎಸ್‌ಜೆಎಂ) ಟೀಕಿಸಿದೆ.

 ಏರ್‌ ಇಂಡಿಯಾ, ಭಾರತ್ ಪೆಟ್ರೋಲಿಯಂ ಸಂಸ್ಥೆಗಳಿಂದ ಹೂಡಿಕೆ ಹಿಂಪಡೆಯುವ ಮೂಲಕ ಕೈಗೆ ಸಿಕ್ಕಿದ ಬೆಲೆಯಲ್ಲಿ ಈ ಉದ್ಯಮಗಳನ್ನು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಮಾರಿಬಿಡುವ ನಿರ್ಧಾರವನ್ನು ಸರಕಾರ ಹಿಂಪಡೆಯಬೇಕು . ಏರ್‌ಇಂಡಿಯಾವನ್ನು ಪುನರ್ರಚಿಸಿ ವೃತ್ತಿಪರವಾಗಿ ನಿರ್ವಹಿಸುವ ಅಗತ್ಯವಿದೆ ಎಂದು ಎಸ್‌ಜೆಎಂ ಒತ್ತಾಯಿಸಿದೆ.

 ಏರ್‌ಇಂಡಿಯಾದ ಸಾಲ ಮತ್ತು ಆಸ್ತಿಯನ್ನು ಪುನರ್ರಚಿಸಿದರೆ ಆಗ ಸಂಸ್ಥೆ ಲಾಭದ ಹಾದಿಯಲ್ಲಿ ಸಾಗಲಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ವ್ಯಹಾತ್ಮಕ ದೃಷ್ಟಿಯಿಂದ ಮತ್ತು ಮಾರುಕಟ್ಟೆಯಲ್ಲಿ ಸಮತೋಲನ ಸಾಧಿಸಲು ಅತ್ಯಗತ್ಯವಾಗಿದೆ ಎಂದು ಸಂಘಟನೆ ತಿಳಿಸಿದೆ.

ಭಾರತ್ ಪೆಟ್ರೋಲಿಯಂ, ದಿ ಕಂಟೈನರ್ ಕಾರ್ಪೊರೇಶನ್ ಆಫ್ ಇಂಡಿಯಾ, ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಸಂಸ್ಥೆಗಳಲ್ಲಿರುವ ಹೂಡಿಕೆ ಹಿಂಪಡೆಯಲು ಸರಕಾರ ನಿರ್ಧರಿಸಿರುವುದಾಗಿ ನವೆಂಬರ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಸ್‌ಜೆಎಂ, ಇದು ಖಂಡಿತವಾಗಿಯೂ ಉತ್ತಮ ವ್ಯವಹಾರ ನಿರ್ಧಾರವಲ್ಲ ಎಂದು ಹೇಳಿದೆ.

ಹರಿದ್ವಾರದಲ್ಲಿ ನಡೆದ ಸ್ವದೇಶಿ ಜಾಗರಣ್ ಮಂಚ್‌ನ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸಾರ್ವಜನಿಕ ರಂಗದ ಉದ್ಯಮಗಳ ಕುರಿತ ನೀತಿ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಲಾಗಿದೆ. ನೀತಿ ಆಯೋಗದ ವರದಿಯು ಸ್ಥಾಪಿತ ಹಿತಾಸಕ್ತಿಗಳ ಯೋಜನೆಯಂತೆ ಕಾರ್ಯ ನಿರ್ವಹಿಸುವ ಕೆಲವು ಸಲಹೆಗಾರರ ಕರಕೌಶಲ್ಯವಾಗಿದ್ದು ಇದನ್ನು ತಿರಸ್ಕರಿಸಿ, ಭಾರತದ ಅಗತ್ಯತೆಗಳನ್ನು ಅರಿತಿರುವ , ಪೂರ್ವಾಗ್ರಹ ಪೀಡಿತರಲ್ಲದ ವ್ಯಕ್ತಿಗಳು ರೂಪಿಸಿದ ವರದಿಯನ್ನು ಅಂಗೀಕರಿಸಬೇಕು ಎಂದು ಎಸ್‌ಜೆಎಂ ಒತ್ತಾಯಿಸಿದೆ.

ಸಾರ್ವಜನಿಕ ರಂಗದ ಉದ್ಯಮಗಳ ಮೌಲ್ಯ ಮತ್ತು ಉಪಯುಕ್ತತೆಯ ಬಗ್ಗೆ ಹೊಸದಾಗಿ ಮೌಲ್ಯಮಾಪನ ನಡೆಸಬೇಕು. ಸಾರ್ವಜನಿಕ ವಲಯದ ಉದ್ಯಮಗಳಿಂದ ಹೂಡಿಕೆ ಹಿಂಪಡೆಯುವ ನಿರ್ಧಾರ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಈ ಉದ್ಯಮಗಳನ್ನು ಖರೀದಿಸುವವರಿಗೆ ಅನ್ಯಾಯವಾಗಿ ಅನುಕೂಲ ಮಾಡಿಕೊಡುತ್ತದೆ ಎಂದು ಎಸ್‌ಜೆಎಂನ ಅಶ್ವನಿ ಮಹಾಜನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News