ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಬೆದರಿಕೆ ಒಡ್ಡಿದ್ದ ಮಾಜಿ ಕಾಂಗ್ರೆಸ್ ಶಾಸಕಿಗೆ 3 ವರ್ಷ ಜೈಲು

Update: 2019-12-01 17:34 GMT
Photo: PTI

 ಭೋಪಾಲ, ಡಿ.1: ಪೊಲೀಸ್ ಠಾಣೆಗೆ ಬೆಂಕಿಹಚ್ಚಿ ಸುಟ್ಟುಬಿಡುವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡೆ, ಮಾಜಿ ಶಾಸಕಿ ಶಕುಂತಳಾ ಖಾಟಿಕ್ ಹಾಗೂ ಇತರ 7 ಜನರಿಗೆ 3 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ.

ಜೊತೆಗೆ, ತಲಾ 5,000 ರೂ. ದಂಡ ವಿಧಿಸಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಸಿಂಗ್ ಆದೇಶ ಹೊರಡಿಸಿದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು 3 ತಿಂಗಳ ಕಾಲಾವಕಾಶ ಒದಗಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

  2017ರಲ್ಲಿ ಈ ಘಟನೆ ನಡೆದಿತ್ತು. ಮಂದಸೌರ್‌ನಲ್ಲಿ ರೈತರ ಮೇಲೆ ಪೊಲೀಸರು ನಡೆಸಿದ ಗೋಲೀಬಾರ್ ಖಂಡಿಸಿ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ಶಕುಂತಳಾ ‘ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಸುಟ್ಟುಬಿಡಿ’ ಎಂದು ಬೆಂಬಲಿಗರನ್ನುದ್ದೇಶಿಸಿ ಆಡಿರುವ ಮಾತಿನ ವೀಡಿಯೊ ದಾಖಲೆಯನ್ನು ಸಾಕ್ಷಿಯಾಗಿ ಒದಗಿಸಲಾಗಿತ್ತು. ಶಕುಂತಳಾ ಹಲವು ಬಾರಿ ಈ ಮಾತನ್ನು ಉಚ್ಚರಿಸಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಶಕುಂತಳಾರ ಜೊತೆಗೆ, ವಿನಾಸ್ ಗೋಯೆಲ್, ದೀಪಕ್ ಸೇಠ್, ನಾರಾಯಣ್, ಬಂಟಿ ಅಲಿಯಾಸ್ ಸಂಜಯ್, ಸತೀಶ್ ವರ್ಮ ಹಾಗೂ ಮನೀಶ್ ಖಾಟಿಕ್‌ರಿಗೂ ಜೈಲುಶಿಕ್ಷೆ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News