ಕಾಶ್ಮೀರ ಸಮಸ್ಯೆಯನ್ನು ಎಚ್ಚರಿಕೆಯಿಂದ ಗಮನಿಸಿದ್ದೇವೆ: ಜಪಾನ್

Update: 2019-12-01 17:46 GMT

ಹೊಸದಿಲ್ಲಿ, ಡಿ. 1: ಕಾಶ್ಮೀರ ಸಮಸ್ಯೆಯನ್ನು ನಾವು ತುಂಬಾ ಎಚ್ಚರಿಕೆಯಿಂದ ಗಮನಿಸಿದ್ದೇವೆ. ಇದು ಸಂವಾದದ ಮೂಲಕ ಶಾಂತಿಯುತವಾಗಿ ಪರಿಹಾರವಾಗಬಹುದು ಎಂದು ಭಾವಿಸುತ್ತೇವೆ ಎಂದು ಜಪಾನ್ ರವಿವಾರ ಹೇಳಿದೆ.

ಮತ್ತಷ್ಟು ವಿಸ್ತೃತ ವ್ಯೂಹಾತ್ಮಕ ಒಪ್ಪಂದಗಳ ನೂತನ ಚೌಕಟ್ಟಿನ ಅಡಿಯಲ್ಲಿ ಭಾರತ ಹಾಗೂ ಜಪಾನ್ ನಡೆಸಿದ ಮೊದಲ ವಿದೇಶಾಂಗ ಹಾಗೂ ರಕ್ಷಣಾ ಸಚಿವಾಲಯದ ಮಾತುಕತೆಯ ಒಂದು ದಿನದ ಬಳಿಕ ಜಪಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಈ ಹೇಳಿಕೆ ನೀಡಿದ್ದಾರೆ.

ಮಾತುಕತೆಯಲ್ಲಿ ಕಾಶ್ಮೀರ ಸಮಸ್ಯೆ ಚರ್ಚೆಯಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಪಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪ ಪತ್ರಿಕಾ ಕಾರ್ಯದರ್ಶಿ ಅಟ್ಸುಶಿ ಕೈಫು, ‘‘ಈ ನಿರ್ದಿಷ್ಟ ಸಮಸ್ಯೆ ಬಗ್ಗೆ ಸಚಿವರು ವಿಸ್ತೃತವಾಗಿ ಚರ್ಚಿಸಿರುವುದು ನನಗೆ ನೆನಪಿಲ್ಲ’’ ಎಂದರು.

‘‘ಆದರೆ, ಇದೇ ಸಂದರ್ಭ ನಾವು, ಕಾಶ್ಮೀರ ಸಮಸ್ಯೆಯನ್ನು ತುಂಬಾ ಎಚ್ಚರಿಕೆಯಿಂದ ಪರಿಶೀಲಿಸುತ್ತಿದ್ದೇವೆ ಎಂದು ಹೇಳಲು ಸಾಧ್ಯ. ಕಾಶ್ಮೀರಕ್ಕೆ ಸಂಬಂಧಿಸಿದ ದೀರ್ಘಕಾಲದಿಂದ ಇರುವ ಭಿನ್ನಾಭಿಪ್ರಾಯಗಳ ಬಗ್ಗೆ ನಮಗೆ ತಿಳಿದಿದೆ. ಮಾತುಕತೆ ಮೂಲಕ ಶಾಂತಿಯುತ ಪರಿಹಾರ ದೊರಕಲಿದೆ ಎಂದು ನಾವು ಭಾವಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮುಂಬೈಯಿಂದ ಅಹ್ಮದಾಬಾದ್‌ಗೆ ಜಪಾನ್ ನೆರವಿನ ಬುಲೆಟ್ ರೈಲು ಯೋಜನೆಯ ಅನಿಶ್ಚಿತತೆ ಕುರಿತು ಪ್ರಶ್ನಿಸಿದಾಗ ಅವರು, ಈ ಬಗ್ಗೆ ಉಭಯ ದೇಶಗಳ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಈ ದೊಡ್ಡ ಯೋಜನೆಯಲ್ಲಿ ಸವಾಲುಗಳು ಎದುರಾಗುತ್ತಿವೆ ಎಂದರು. ‘‘ಈಗ ಜಪಾನ್ ಹಾಗೂ ಚೀನಾದ ನಡುವೆ ಉಲ್ಲಾಸದ ಸಂಬಂಧ ಇದೆ. ಆದರೆ, ನಾವು ಭದ್ರತೆ ಹಾಗೂ ದಕ್ಷಿಣ ಚೀನ ಸೇರಿದಂತೆ ಕಡಲ ವಿವಾದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ’’ ಎಂದು ಕೈಫು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News