ಪೆನ್ಸಿಲ್ ಬಾಕ್ಸ್; ಮಕ್ಕಳದ್ದೇ ಕ್ಲೈಮಾಕ್ಸ್..!

Update: 2019-12-01 18:12 GMT

ಚಲನಚಿತ್ರ ಅಂದರೆ ಹೊಡಿ ಬಡಿ, ಪ್ರೀತಿ ಪ್ರೇಮ, ರಾಜಕೀಯ, ಅಧಿಕಾರ ದಾಹ, ದರೋಡೆ, ಕಳ್ಳತನ... ಹೀಗೇ ಕಣ್ಮುಂದೆ ಹಾದು ಹೋಗುವ ಈ ದಿನದಲ್ಲಿ ಇದಾವುದೂ ಇಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವೊಂದು ತೆರೆ ಕಂಡಿದೆ. ಅದುವೇ "ಪೆನ್ಸಿಲ್ ಬಾಕ್ಸ್".

ಪೆನ್ಸಿಲ್ ಬಾಕ್ಸ್ ಅಂದರೆ ಅದರಲ್ಲಿ ಪೆನ್ನು, ಪೆನ್ಸಿಲು, ರಬ್ಬರು ಮಾತ್ರವಲ್ಲ ಅದು ಹತ್ತು ಹಲವು ಉಪಯುಕ್ತ ಸಾಮಗ್ರಿಗಳ ಭಂಡಾರ ಎಂದು ತೋರಿಸಿಕೊಟ್ಟವರು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವ ಎಳೆಯ ಹುಡುಗಿ ದೀಕ್ಷಾ.

ಆಕೆಯ ಪೆನ್ಸಿಲ್ ಬಾಕ್ಸ್ ಮೆಡಿಕಲ್, ಗ್ರೋಸರಿ, ಟೈಲರಿಂಗ್... ಹೀಗೇ ಹಲವು ಉಪಕರಣಗಳ ಆಗರ. ದೀಕ್ಷಾಳ ಮೊದಲ ಚಿತ್ರ ಇದಾದರೂ ಅದ್ಭುತ ನಟನೆಯ ಮೂಲಕ ಮನಗೆದ್ದ ಹುಡುಗಿ. ಹೆತ್ತವರ ಮಾತು ಕೇಳದೇ ಹಳ್ಳಿಯಿಂದ ಪಟ್ಟಣ ಸೇರಿದ ಮಗ ಮತ್ತು ಸೊಸೆ ತಮ್ಮ ಮುದ್ದು ಮಗಳು ದೀಕ್ಷಾಳನ್ನು ಪಟ್ಟಣದ ಖಾಸಗಿ ಶಾಲೆಗೆ ಕಳುಹಿಸುತ್ತಾರೆ. ಅಲ್ಲಿ ದೀಕ್ಷಾಳಿಗೆ ನೆರೆಮನೆಯ ಸಾಗರ್ ಉತ್ತಮ ಗೆಳೆಯ ಮತ್ತು ಸಹಪಾಠಿಯಾಗುತ್ತಾನೆ. ಮುಂದೆ ಆರ್ಥಿಕ ಸಂಕಷ್ಟದಿಂದ ದೀಕ್ಷಾ ಮತ್ತು ಆಕೆಯ ಹೆತ್ತವರು ಹಳ್ಳಿ ಕಡೆ ವಾಸ ಬದಲಾಯಿಸುವ ಪರಿಸ್ಥಿತಿ. ಖಾಸಗಿ ಶಾಲೇಲಿ ಕಲಿಯುತ್ತಿದ್ದ ದೀಕ್ಷಾ ಹಳ್ಳಿಯ ಸರಕಾರಿ ಶಾಲೆಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ. ಪ್ರತಿಭಾವಂತೆ ವಿದ್ಯಾರ್ಥಿನಿ ದೀಕ್ಷಾ ಸರಕಾರಿ ಶಾಲೆಯ ಚಿತ್ರಣವನ್ನೇ ಬದಲಾಯಿಸುತ್ತಾಳೆ. ಖಾಸಗಿ ಶಾಲೆಯಿಂದ ಬಿಟ್ಟು ಹೋಗುವ ದೀಕ್ಷಾ ಮತ್ತು ಆಕೆಯ ಸಂಗಡಿಗರ ಬೇರ್ಪಡುವಿಕೆಯ ದೃಶ್ಯವಂತೂ ಮನ ಕಲಕಿಸುತ್ತದೆ.

ಚಿತ್ರದುದ್ದಕ್ಕೂ ಅಲ್ಲಲ್ಲಿ ಸೆಂಟಿಮೆಂಟ್ ಸೀನುಗಳಿವೆ. ಜೊತೆಗೆ ತುಳು ಹಾಸ್ಯ ಕಲಾವಿದರಾದ ಅರವಿಂದ್ ಬೋಳಾರ್ ಮತ್ತು ಭೋಜರಾಜ ವಾಮಂಜೂರು ಅವರ ಹಾಸ್ಯ ಪಾತ್ರಗಳು ಸೂಪರು. ಕರಾವಳಿಯಲ್ಲಿ ಬಹುತೇಕ ಪುತ್ತೂರಿನಲ್ಲಿಯೇ ಚಿತ್ರೀಕರಣಗೊಂಡ ಪೆನ್ಸಿಲ್ ಬಾಕ್ಸ್ ಪುತ್ತೂರಿನ ಸುದಾನ ಶಾಲೆ, ದರ್ಬೆಯ ಲಿಟ್ಲ್ ಫ್ಲವರ್ ಶಾಲೆ ಹಾಗೂ ಸರಕಾರಿ ಶಾಲೆಯೊಂದರ ಸುತ್ತ ಚಿತ್ರ ಹೆಣೆದಿವೆ. ಮಕ್ಕಳ ಕಲರವ, ಕಂದಮ್ಮಗಳ ಪ್ರಪಂಚವೇ ಈ ಚಿತ್ರದಲ್ಲಿ ಮೈದೆಳೆದಿವೆ. "ಯೂ ನೋ ವೈ... ಸಂಡೇ ನಮ್ದೇ..." ಹಾಡು ಹಿಟ್ ಆಗಿವೆ. ಗ್ರಾಮ್ಯ ಸೊಗಡು, ಪಚ್ಛೆ ಪರಿಸರದ ಮತ್ತೊಂದು ಹಾಡು ಕೂಡಾ ಚಿಂತನೆಗೆ ಹಚ್ಚುತ್ತದೆ. ದೇಶಪ್ರೇಮ ಸಾರುವ ರಿಯಾಲಿಟಿ ಶೋ ಸ್ಪರ್ಧೆಯ ಹಾಡಂತೂ ಮೈನವಿರೇಳಿಸುತ್ತದೆ. (ಗ್ರಾಫಿಕ್ಸ್ ಹೊರತುಪಡಿಸಿ)

ಪುತ್ತೂರು ಸುದಾನ ಶಾಲೆಯ ವಿದ್ಯಾರ್ಥಿನಿ ಹಾಗೂ ಟಿವಿ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ದೀಕ್ಷಾ ಡಿ. ರೈ ಈ ಚಿತ್ರದ ನಾಯಕಿ. ಮನೋಜ್ಞವಾಗಿ ನಟಿಸಿ ಪಾತ್ರಕ್ಕೆ ಜೀವ ತುಂಬಿರುವ ಪುತ್ತೂರ ಹುಡುಗಿ. ಉತ್ತಮ ಸಂದೇಶ ಸಾರುವ, ಸಮಾಜದ, ಶಿಕ್ಷಣದ ಅಂಕುಡೊಂಕುಗಳನ್ನು ತಿದ್ದುವ "ಪೆನ್ಸಿಲ್ ಬಾಕ್ಸ್" ಒಮ್ಮೆ ನೋಡಲೇಬೇಕಾದ ಅತ್ಯುತ್ತಮ ಚಿತ್ರ. ನನ್ನ ಮಗಳು ಕೂಡಾ ಸುದಾನ ಶಾಲೆಯ ವಿದ್ಯಾರ್ಥಿನಿ. ಆಕೆಯ ಒತ್ತಾಯಕ್ಕೆ ಮಣಿದು ಉತ್ತಮ ಚಿತ್ರವೊಂದನ್ನು ನೋಡಿದ್ದೇನೆ. ಸಾಮಾಜಿಕ ಕಳಕಳಿಯ 'ಪೆನ್ಸಿಲ್ ಬಾಕ್ಸ್'ನ್ನು ನಿರ್ದೇಶಿಸಿರುವ ರಝಾಕ್ ಪುತ್ತೂರು ಹಾಗೂ ನಿರ್ಮಾಪಕರಾದ ದಯಾನಂದ ಎಸ್. ರೈ ಅಭಿನಂದನಾರ್ಹರು.

Writer - ರಶೀದ್ ವಿಟ್ಲ.

contributor

Editor - ರಶೀದ್ ವಿಟ್ಲ.

contributor

Similar News