ದಿಲ್ಲಿಯ ಲೋದಿ ಗಾರ್ಡನ್‌ನಲ್ಲಿ ಒಂದಾದ ದಲಿತರು

Update: 2019-12-02 06:25 GMT

1517ರ ನವೆಂಬರ್ 21ರಂದು ಸುಲ್ತಾನ್ ಸಿಕಂದರ್ ಲೋದಿ ತಾನೇ ನಿರ್ಮಿಸಿದ ನಗರವಾದ ಆಗ್ರಾದಲ್ಲಿ ನಿಧನಹೊಂದಿದ. 502 ವರ್ಷಗಳ ಬಳಿಕ ಗುರುವಾರದಂದು ಅವನ ಸಮಾಧಿಯ ಎದುರು ದಿಲ್ಲಿಯಲ್ಲಿ ಅವನಿಗೆ ಶ್ರದ್ಧಾಂಜಲಿ ಸಲ್ಲಿಸಲು ಜನರ ಒಂದು ಚಿಕ್ಕ ಗುಂಪು ನೆರೆದಿತ್ತು.

ಲೋದಿ ಗಾರ್ಡನ್‌ನಲ್ಲಿರುವ ಆ ಗೋರಿಯ ಎದುರು ನೆರೆದಿದ್ದ ಜನರು ಕುತೂಹಲ ಹುಟ್ಟಿಸುವ ಘೋಷಣೆಗಳನ್ನು ಕೂಗಿದರು: ‘‘ಸಿಕಂದರ್ ಲೋದಿ ಅಮರ್ ರಹೇ. ಜೈ ಭೀಮ್. ಸಿಕಂದರ್ ಲೋದಿ ಚಿರಾಯುವಾಗಲಿ, ಗುರು ರವಿದಾಸ್‌ಗೆ ಜಯವಾಗಲಿ, ಭೀಮರಾವ್ ಅಂಬೇಡ್ಕರ್‌ಗೆ ಜಯವಾಗಲಿ.’’

ಸುಮಾರು ನೂರು ಜನರಿದ್ದ ಆ ಗುಂಪಿನಲ್ಲಿ ಮಧ್ಯಯುಗದ ಸುಲ್ತಾನ ಲೋದಿಯ ನೆನಪನ್ನು ಪುನರುಜ್ಜೀವನಗೊಳಿಸುವ ದಲಿತ ಕಾರ್ಯಕರ್ತರಿದ್ದರು. ಅವರ ಘೋಷಣೆಗಳಲ್ಲಿ ಲೋದಿಯ ಜತೆಗೆ ಮಧ್ಯಯುಗದ ದಲಿತ ಸಂತ ರವಿದಾಸ್‌ಗೆ ಮತ್ತು ಅಂಬೇಡ್ಕರ್‌ರವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಈ ವಿಶಿಷ್ಟ ಪ್ರತಿಭಟನೆಯ ಹಿಂದೆ ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಒಂದು ಘಟನೆಯಿದೆ: ಆಗ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರವು ಒಂದು ರವಿದಾಸ್ ದೇವಾಲಯವನ್ನು ಕೆಡವಿ ದಿಲ್ಲಿಯ ತುಘಲಕಾಬಾದ್‌ನಲ್ಲಿದ್ದ ಆ ದೇವಾಲಯದ ನಿವೇಶನವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ದಲಿತರು ಅನುಯಾಯಿಗಳಾಗಿರುವ ಸಂತ ರವಿದಾಸ್ ಒಂದು ರಾಜಕೀಯ ಸಂಕೇತವಾಗಿದ್ದಾರೆ. ಅಲ್ಲದೆ ದೇವಾಲಯವಿದ್ದ ಜಾಗ ರವಿದಾಸರಿಗೆ ದಿಲ್ಲಿಯ ಸಿಕಂದರ್ ಲೋದಿ 16ನೇ ಶತಮಾನದಲ್ಲಿ ದೇಣಿಗೆಯಾಗಿ ನೀಡಿದ್ದ ಎಂದು ದಲಿತರು ಈಗ ವಾದಿಸುತ್ತಿದ್ದಾರೆ. ದಲಿತರು ಈ ವಾದವನ್ನು ಕೇವಲ ತಮ್ಮ ರಾಜಕೀಯ ಹಕ್ಕುಗಳಿಗಾಗಿಯಷ್ಟೆ ಅಲ್ಲದೆ ದಲಿತ- ಮುಸ್ಲಿಮ್ ಒಗ್ಗಟ್ಟಿನ ಸೂಚನೆಯಾಗಿಯೂ ಮುಂದು ಮಾಡುತ್ತಿದ್ದಾರೆ.

‘‘ಮಿಶನ್ ಫತೇ ತುಘಲಕಾಬಾದ್’’ ಎಂಬ ಹೆಸರಿನಲ್ಲಿ ದಲಿತ ಕಾರ್ಯಕರ್ತರು ಸಿಕಂದರ್ ಲೋದಿಗೆ ತಮ್ಮ ಗೌರವವನ್ನು ಅರ್ಪಿಸಿದ್ದಷ್ಟೇ ಅಲ್ಲದೆ, ಅವರು ಸರಕಾರ ತಮ್ಮ ಜಾಗವನ್ನು ತಮಗೆ ಮರಳಿಸಬೇಕೆಂದೂ ಬೇಡಿಕೆ ಸಲ್ಲಿಸಿದರು. ಅಂದು ಅಲ್ಲಿ ಮಾಡಲಾದ ಭಾಷಣಗಳಲ್ಲಿ ಸರಕಾರ ನಮ್ಮಿಂದ ಕಸಿದುಕೊಂಡ ನಿವೇಶನ ನಮಗೆ ಸೇರಿದ್ದು, ಯಾಕೆಂದರೆ ನಮಗೆ ಅದು ಸುಲ್ತಾನ್ ಸಿಕಂದರ್‌ನಿಂದ ಕೊಡುಗೆಯಾಗಿ ಬಂದ ನಿವೇಶನ ಎಂದು ಭಾಷಣಕಾರರು ಒತ್ತಿಹೇಳಿದರು. ರವಿದಾಸ್ ಪಂಥದ ಓರ್ವ ಧಾರ್ಮಿಕ ನಾಯಕ ಸುಖದೇವ್‌ಜಿ ವಾಗ್ಮಾರೆ ‘‘ನಮ್ಮನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಕಾಲದಲ್ಲಿ ಸಿಕಂದರ್ ಲೋದಿ ನಮ್ಮನ್ನು ಗೌರವಿಸಿದ, ಸಂತ ರವಿದಾಸರನ್ನು ತನ್ನ ಗುರುವಾಗಿ ಸ್ವೀಕರಿಸಿದ; ಮತ್ತು ಅವರಿಗೆ ಈ ಜಮೀನನ್ನು ದಾನವಾಗಿ ನೀಡಿದ. ಇದಕ್ಕಾಗಿ ನಾವು ಸುಲ್ತಾನನಿಗೆ ವಂದನೆ ಸಲ್ಲಿಸುತ್ತೇವೆ, ಕೃತಜ್ಞತೆ ಸಲ್ಲಿಸುತ್ತೇವೆ’’ ಎಂದರು.

ಸಂತ ರವಿದಾಸರ ಆಧುನಿಕ ಜೀವನ ಚರಿತ್ರೆಯಾಗಿರುವ ‘ರವಿದಾಸ್ ರಾಮಾಯಣ’ದ ಒಂದು ಆವೃತ್ತಿಯ ಪ್ರಕಾರ ಲೋದಿ ಮೊದಲು ರವಿದಾಸರನ್ನು ಜೈಲಿಗೆ ತಳ್ಳಿದ. ರವಿದಾಸ್ ತನ್ನ ಪವಾಡ ಶಕ್ತಿಯನ್ನು ಬಳಸಿ ಜೈಲಿನಿಂದ ಪವಾಡ ಸದೃಢವಾಗಿ ತಪ್ಪಿಸಿಕೊಂಡರು. ಇದರಿಂದ ಆಶ್ಚರ್ಯಚಕಿತನಾದ ಲೋದಿ ಬದಲಾದ; ರವಿದಾಸರ ಅನುಯಾಯಿಯಾದ.

ರಾಜಕೀಯ ವರ್ಸಸ್ ಇತಿಹಾಸ

ದೇವಾಲಯ ವಿವಾದ ಹೊಸತಲ್ಲ. ಭಾರತ ಈಗ ಹಿಂದುತ್ವವಾದಿ ಶಕ್ತಿಗಳ ಕೈಯಲ್ಲಿ ನಲುಗುತ್ತಿದೆ. ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸಲಾಗಿದೆ.

‘‘ಸುಲ್ತಾನ ಮುಸ್ಲಿಮ್, ಆದರೆ ಆತ ನಮಗೆ ಜಮೀನು ನೀಡಿದ್ದ. ಇಂದಿನ ಆಡಳಿತಗಾರರು ನಮ್ಮಿಂದ ಎಲ್ಲವನ್ನೂ ಕಿತ್ತುಕೊಂಡು ನಮ್ಮ ಭರವಸೆಗಳನ್ನು ಹುಸಿಗೊಳಿಸಿದ್ದಾರೆ; ಎಂದಿದ್ದಾರೆ’’ ಅಖಿಲ ಭಾರತ ಅಂಬೇಡ್ಕರ್ ಮಹಾಸಭಾದ ಅಶೋಕ್ ಭಾರ್ತಿ.ದಲಿತ ಕಾರ್ಯಕರ್ತರು ಹಿಂದುತ್ವವಾದಿಗಳು ಮುಸ್ಲಿಮ್ ದೊರೆಗಳನ್ನು ಚಿತ್ರಿಸುವುದಕ್ಕಿಂತ ವಿರುದ್ಧ ದಿಕ್ಕಿನಲ್ಲಿ ಚಿತ್ರಿಸುತ್ತಾರೆ ಅವರನ್ನು ಸರ್ವಾಧಿಕಾರಿಗಳಾಗಿ ಚಿತ್ರಿಸದೆ ಜ್ಞಾನಿಗಳಾದ ದೊರೆಗಳಾಗಿ ಚಿತ್ರಿಸುತ್ತಾರೆ. ‘‘ಅಂದಿನ ಕಾಲದಲ್ಲಿ ಅಸ್ಪಶ್ಯತೆ ಇತ್ತು. ಆದರೆ ಸುಲ್ತಾನನು ಈ ಮೂಢನಂಬಿಕೆಗಳಿಗೆ ಬೆಲೆಕೊಡಲಿಲ್ಲ. ದಲಿತ ರವಿದಾಸರನ್ನು ತನ್ನ ಗುರುವಾಗಿ ಸ್ವೀಕರಿಸಿದ. ಆದರೆ ಇಂದು ಸ್ವ-ಘೋಷಿತ ಹಿಂದೂ ನಾಯಕರು ಆತ ನಮಗೆ ದೇಣಿಗೆಯಾಗಿ ನೀಡಿದ್ದ ಜಾಗವನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ. ಇದೆಂತಹ ವ್ಯಂಗ್ಯನೋಡಿ’’ ಎನ್ನುತ್ತಾರೆ ಭಾರ್ತಿ.

 ದಲಿತರ ಬೇಡಿಕೆಗಳು ದೇವಾಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ದಲಿತ ಕಾರ್ಯಕರ್ತರು ‘‘ದಲಿತ್ ಮುಸ್ಲಿಮ್ ಏಕತಾ’’ ಘೋಷಣೆಗಳನ್ನು ಕೂಗಿದರು. ‘‘ಸುಲ್ತಾನ್ ಸಿಕಂದರ್ ದಲಿತ- ಮುಸ್ಲಿಮ್ ಏಕತೆಯ, ಒಗ್ಗಟ್ಟಿನ ಒಂದು ಸಂಕೇತ. ದಲಿತನೊಬ್ಬ ಯಾವಾಗೆಲ್ಲ ಲೋದಿ ಗಾರ್ಡನ್‌ಗೆ ಬರುತ್ತಾನೋ ಆಗ ಆತ ಈ ಸಮಾಧಿಗೆ ನಮಿಸಬೇಕು’’ ಎಂದು ಹೇಳುತ್ತಾರೆ ಭಾರ್ತಿ.

ಕೃಪೆ: scroll.in

Writer - ಶುಐಬ್ ದನಿಯಾಲ್

contributor

Editor - ಶುಐಬ್ ದನಿಯಾಲ್

contributor

Similar News