ಸೌದಿ ಜೈಲಿನಲ್ಲಿ ಮುಲ್ಕಿಯ ಜೋನ್ ಮೊಂತೆರೊ ನಿಗೂಢ ಸಾವು : ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಆರೋಪ

Update: 2019-12-02 12:38 GMT

ಉಡುಪಿ, ಡಿ. 2: ಸೌದಿ ಅರೇಬಿಯಾದ ಜೈಲೊಂದರಲ್ಲಿ ಸೆರೆವಾಸದಲ್ಲಿದ್ದ ದ.ಕ. ಜಿಲ್ಲೆಯ ಮುಲ್ಕಿ ಮೂಲದ ಇಂಜಿನಿಯರ್ ಜೋನ್ ಮೊಂತೇರೊ (54) ಎಂಬವರು ನಿಗೂಢವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಇವರ ಸಾವಿನ ಬಗ್ಗೆ ಸಂಶಯಗಳು ವ್ಯಕ್ತವಾಗಿರುವುದರಿಂದ ಕುಟುಂಬಕ್ಕೆ ನ್ಯಾಯದ ಒದಗಿಸುವ ನಿಟ್ಟಿನಲ್ಲಿ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಈ ಬಗ್ಗೆ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.

ಮೃತ ಜೋನ್ ಮೊಂತೆರೊ ಕುಟುಂಬದವರೊಂದಿಗೆ ಸೋಮವಾರ ಉಡುಪಿ ಕುಂಜಿಬೆಟ್ಟುವಿನ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಈ ಕುರಿತು ಮಾಹಿತಿ ನೀಡಿದರು.

ಮೊಂತೆರೊ ಯಾವ ಕಾರಣಕ್ಕಾಗಿ ಜೈಲುಶಿಕ್ಷೆ ಅನುಭವಿಸಿದರು ಮತ್ತು ಅವರು ಮಾಡಿರುವ ಅಪರಾಧ ಏನು ಎಂಬುದು ಕೊನೆಯವರೆಗೂ ಅವರಿಗಾಗಲಿ, ಅವರ ಕುಟುಂಬಕ್ಕಾಗಲಿ ತಿಳಿಯಲೇ ಇಲ್ಲ. ಹಲವು ಯಕ್ಷಪ್ರಶ್ನೆ ಗಳನ್ನು ಉಳಿಸಿ ಹೋದ ಮೊಂತೆರೊ ಸಾವಿಗೆ ನ್ಯಾಯ ಒದಗಿಸಲು ಸರ್ವ ಪ್ರಯತ್ನ ನಡೆಸಲಾಗುವುದೆಂದು ಡಾ.ಶಾನುಭಾಗ್ ತಿಳಿಸಿದರು.

ಅನಿರೀಕ್ಷಿತವಾಗಿ ಜೈಲುಪಾಲು

ಮುಲ್ಕಿ ಮೂಲದ ಜೋನ್ ಮೊಂತೆರೊ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಮಾಡಿ, ದಿಲ್ಲಿಯ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉದ್ಯೋಗಿ ಯಾಗಿದ್ದರು. ಸುಮಾರು 8 ವರ್ಷಗಳ ಕಾಲ ದಿಲ್ಲಿಯಲ್ಲಿದ್ದ ಇವರು, ಅಮೀನಾ ಎಂಬವರನ್ನು ವಿವಾಹವಾಗಿದ್ದು, ಅವರಿಗೆ ಕರೀಶ್ಮಾ ಹಾಗೂ ನಿರ್ಮಾಣ ಎಂಬ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಹಾಗೂ ಮಕ್ಕಳನ್ನು ದಿಲ್ಲಿಯ ಬಾಡಿಗೆ ಮನೆಯೊಂದರಲ್ಲಿ ಬಿಟ್ಟು 2003 ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿ ಹವಾನಿಯಂತ್ರಣ ನಿರ್ವಹಣೆಯ ಗುತ್ತಿಗೆ ದಾರರಾಗಿ ದುಡಿಯುತ್ತಿದ್ದ ಜೋನ್, 2014ರಲ್ಲಿ ರಿಯಾದ್‌ನಿಂದ 350 ಕಿ.ಮಿ. ದೂರದ ಅಲ್-ದುವಾದ್ಮಿ ಎಂಬಲ್ಲಿರುವ ಜೈಲಿನಲ್ಲಿದ್ದ ಎಸಿ ರಿಪೇರಿ ಮಾಡಲು ಹೋಗಿದ್ದ ವೇಳೆ ಬಂಧನಕ್ಕೆ ಒಳಗಾದರು. ಇವರನ್ನು ಯಾವ ಕಾರಣಕ್ಕಾಗಿ ಬಂಧಿಸಿದರೆಂಬುದು ಅವರಿಗೆ ತಿಳಿದಿರಲಿಲ್ಲ ಎಂದು ಡಾ.ಶಾನುಭಾಗ್ ಹೇಳಿದರು.

ಈ ಮಧ್ಯೆ ಕುಟುಂಬದವರು ಸಾಕಷ್ಟು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ. ಬಳಿಕ ನ್ಯಾಯಾಲಯ ಇವರಿಗೆ ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತು. ಕೋರ್ಟ್ ಆದೇಶ ಪ್ರತಿಯನ್ನು ನೀಡದ ಹಿನ್ನೆಲೆಯಲ್ಲಿ ಇವರು ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದೆ ಜೈಲಿನಲ್ಲಿಯೇ ಇರಬೇಕಾಯಿತು. ಈ ಮಧ್ಯೆ ತೀವ್ರ ಅನಾರೋಗ್ಯಕ್ಕೆ ಒಳಗಾದ ಇವರು, 2019ರ ಫೆ.16ರಂದು ಜೈಲಿನಲ್ಲಿಯೇ ಮೃತಪಟ್ಟರು ಎಂದು ಅವರು ವಿವರಿಸಿದರು.

ಕುಟುಂಬದಿಂದ ಪ್ರತಿಷ್ಠಾನಕ್ಕೆ ದೂರು

ಇತ್ತ ದೆಹಲಿಯಲ್ಲಿದ್ದ ಅಮೀನಾ ತನ್ನ ಪತಿಯ ಮೃತದೇಹಕ್ಕಾಗಿ ಭಾರತೀಯ ರಾಯಭಾರಿ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ ದರೂ ಯಾವುದೇ ಪ್ರಯೋಜನ ಆಗಲಿಲ್ಲ. ಕೊನೆಗೆ ಅವರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ದೂರು ನೀಡಿದರು. ಅದರಂತೆ ಪ್ರತಿ ಷ್ಠಾನ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ವಿದೇಶಾಂಗ ಸಚಿವರನ್ನು ಸಂಪರ್ಕಿಸಿತು. ಇದರ ಪರಿಣಾಮವಾಗಿ ಮೃತಪಟ್ಟ 9 ತಿಂಗಳ ನಂತರ ಅಂದರೆ ನ. 27 ರಂದು ಜೋನ್ ಮೃತದೇಹ ಕುಟುಂಬವನ್ನು ತಲುಪಿತು. ಇದೀಗ ಅಮೀನಾ ಮತ್ತು ಮಕ್ಕಳು ಉಡುಪಿಯಲ್ಲಿ ನೆಲೆಸಿದ್ದು, ಈ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರತಿಷ್ಠಾನ ಸಂಪೂರ್ಣ ವಾಗಿ ಬದ್ಧವಾಗಿದೆ. ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ರಾಯಭಾರಿ ಕಚೇರಿ ಸಹಕರಿಸಿದಲ್ಲಿ ಈ ಸಂಬಂಧ ಸೌದಿಯ ರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಲು ಯೋಜಿಸಲಾಗಿದೆ ಎಂದು ಡಾ.ಶಾನುಭಾಗ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೃತರ ಪತ್ನಿ ಅಮೀನಾ, ಮಗಳು ಕರೀಷ್ಮಾ, ನ್ಯಾಯ ವಾದಿ ಶಾಂತಾರಾಮ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಜೋಸೆಫ್ ರೆಬೊಲ್ಲೊ, ನಿವೃತ್ತ ತಹಶೀಲ್ದಾರ್ ಮುರಳೀಧರ್ ಉಪಸ್ಥಿತರಿದ್ದರು.

ಜೋನ್ ಸಾವಿನ ಸುತ್ತ ಸಂಶಯ

ಗಲ್ಫ್ ದೇಶದಲ್ಲಿ ಮೃತಪಟ್ಟ ವ್ಯಕ್ತಿಗೆ ಸಂಬಂಧಿಸಿದ ಪಾಸ್‌ಪೋರ್ಟ್, ಜೀವ ವಿಮೆ ಸೇರಿದಂತೆ ಅನೇಕ ದಾಖಲೆಗಳನ್ನು ಕಳುಹಿಸುವುದು ಭಾರತದ ರಾಯ ಭಾರಿ ಕಚೇರಿಯ ಕರ್ತವ್ಯ. ಒಂದು ವೇಳೆ ಅಸಹಜ ಮರಣ ಸಂಭವಿಸಿದಲ್ಲಿ ಮರಣೋತ್ತರ ಪರೀಕ್ಷೆ ವರದಿ ಕಳುಹಿಸುವುದು ಅಗತ್ಯ. ಆದರೆ ಜೋನ್ ಮೊಂತೆರೊ ಪ್ರಕರಣದಲ್ಲಿ ಈ ಯಾವುದೇ ದಾಖಲೆಗಳನ್ನು ಕಳುಹಿಸದೆ ಹಲವು ಸಂಶಯಗಳಿಗೆ ಎಡೆ ಮಾಡಿಕೊಡಲಾಗಿದೆಂದು ಡಾ.ಶಾನುಭಾಗ್ ದೂರಿದರು.

ಜೋನ್ ಜೈಲಿನಲ್ಲಿ ಮೃತಪಟ್ಟಿರುವುದರಿಂದ ಮರಣೋತ್ತರ ಪರೀಕ್ಷೆ ನಡೆಸಬೇಕು. ಮೃತದೇಹದ ಮೇಲಿರುವ ಗಾಯಗಳನ್ನು ನೋಡಿದಾಗ ಮರಣೋತ್ತರ ಪರೀಕ್ಷೆ ನಡೆಸಿದಂತೆ ಕಾಣುತ್ತದೆ. ಆದರೆ ಆ ಬಗ್ಗೆ ಯಾವುದೇ ವರದಿ ಇಲ್ಲ. ಮೃತದೇಹದ ವಿವಿಧ ಅಂಗಾಂಗಗಳನ್ನು ತೆಗೆದು ಹತ್ತಿ ಹಾಗೂ ರಾಸಾಯಿನಿಕ ತುಂಬಿಸಲಾಗಿದೆ. ಇದರಿಂದ ಎರಡನೆ ಬಾರಿ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಮರಣ ದೃಢ ಪತ್ರಿಕೆಯಲ್ಲಿ ಹೃದಯ ಮತ್ತು ಶ್ವಾಸ ನಿಂತಿರು ವುದರಿಂದ ಮೃತ ಸಂಭವಿಸಿದೆ ಎಂದು ಕಾರಣ ತಿಳಿಸಿರುವುದು ವಿಚಿತ್ರವಾಗಿದೆ. ಜೈಲು ಅಧಿಕಾರಿಗಳ ವಶದಲ್ಲಿದ್ದ ಜೋನ್ ಅವರ ಮೂಲ ಪಾಸ್‌ಪೋರ್ಟ್ ಕಳುಹಿಸುವ ಬದಲು ಎಮರ್‌ಜೆನ್ಸಿ ಪಾಸ್‌ಪೋರ್ಟ್ ಕಳುಹಿಸಲಾಗಿದೆ. ಕಾರ್ಮಿಕ ಇಲಾಖೆಯ ನೊಂದಾಣಿ, ವಿಮೆ, ವೈದ್ಯಕೀಯ ಚಿಕಿತ್ಸಾ ದಾಖಲೆಗಳು ಇಲ್ಲ. ಅನಾರೋಗ್ಯ ಪೀಡಿತ ಜೋನ್‌ಗೆ ಸರಿಯಾದ ಚಿಕಿತ್ಸೆ ನೀಡಿಲ್ಲ ಮತ್ತು ಅವರಿಗೆ ಜೈಲಿನಲ್ಲಿ ಯಾವ ರೀತಿಯಲ್ಲಿ ಹಿಂಸೆ ನೀಡಲಾಗಿದೆ ಎಂಬುದನ್ನು ಸ್ವತಃ ಜೋನ್ ಹೇಳಿರುವ ದ್ವನಿ ಮುದ್ರಿಕೆ ಲಭ್ಯ ಇದೆ ಎಂದು ಅವರು ತಿಳಿಸಿದರು.

ನ್ಯಾಯಕ್ಕಾಗಿ ಕಣ್ಣೀರಿಟ್ಟ ತಾಯಿ ಮಗಳು

‘ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ನಮ್ಮ ಸಹಾಯಕ್ಕೆ ಬಂದಿಲ್ಲ. ಈಗ ನಮಗೆ ಪ್ರತಿಷ್ಠಾನ ಸಹಾಯ ಮಾಡುತ್ತಿದೆ. ಜೀವಂತವಾಗಿರು ವಾಗ ಅವರಿಗೆ ನ್ಯಾಯ ಸಿಕ್ಕಿಲ್ಲ. ಈಗಲಾದರೂ ನಮ್ಮವರ ಸಾವಿಗೆ ನ್ಯಾಯ ಸಿಗಲಿ’ ಎಂದು ಮೃತ ಜೋನ್ ಪತ್ನಿ ಅಮೀನಾ ಹಾಗೂ ಮಗಳು ಕರೀಷ್ಮಾ ಕಣ್ಣೀರಿಟ್ಟರು.

‘ಭಾರತೀಯ ರಾಯಭಾರಿ ಕಚೇರಿ ನನ್ನ ತಂದೆ ಸಾವಿನ ಬಗ್ಗೆ ನಿರ್ಲಕ್ಷ ತೋರಿಸಿತು. ತಂದೆಯ ಸಾವಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಸೌದಿ ಅರೇಬಿಯಾ ಸರಕಾರ ನೀಡಿಲ್ಲ. ಇಲ್ಲಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಿದ ರೀತಿಯಲ್ಲಿ ಮೃತದೇಹವನ್ನು ಕಳುಹಿಸಿದ್ದಾರೆ’ ಎಂದು ಕರೀಷ್ಮಾ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News