ಡೆಂಗ್, ಚಿಕುಂಗುನ್ಯ ಅರಿವು ಮೂಡಿಸಲು ‘ನಾಗರಿಕರಿಗೊಂದು ಸವಾಲ್’

Update: 2019-12-02 15:46 GMT

ಉಡುಪಿ, ಡಿ.2: ಉಡುಪಿ ಜಿಲ್ಲೆಯಲ್ಲಿ ಡೆಂಗ್ ಹಾಗೂ ಚಿಕುಂಗುನ್ಯ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಈಡೀಸ್ ಸೊಳ್ಳೆಗಳ ನಿಯಂತ್ರಣ ಕ್ಕಾಗಿ ಗ್ರಾಮಮಟ್ಟದಲ್ಲಿ ಲಾರ್ವ ಸಮೀಕ್ಷೆ ನಡೆಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಆರೋಗ್ಯ ಇಲಾಖೆಯು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಮೂಲಕ ನಾಗರಿಕರಿಗೆ ಒಂದು ಸವಾಲು ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ.ಕೆ ಶೆಟ್ಟಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ನೇತೃತ್ವದಲ್ಲಿ ಸೋಮವಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾಹಿತಿ ಕರಪತ್ರ ಬಿಡುಗಡೆಗೊಳಿಸಿ ಸೊಳ್ಳೆ ಪರದೆಗಳನ್ನು ವಿತರಿಸಲಾಯಿತು.

2019ರ ನವೆಂಬರ್‌ನಿಂದ 2020ರ ಜನವರಿವರೆಗೆ ಒಟ್ಟು 3 ತಿಂಗಳುಗಳ ಕಾಲ ನಿರಂತರವಾಗಿ ಈ ಕಾರ್ಯಕ್ರಮ ನಡೆಯಲಿದ್ದು, ಗ್ರಾಮ/ಪಂಚಾ ಯತ್/ತಾಲೂಕು/ಜಿಲ್ಲಾಮಟ್ಟದ ಎಲ್ಲಾ ಸ್ಥಳೀಯ ಚುನಾಯಿತ ಪ್ರತಿನಿಧಿ ಗಳು ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಟ್ಟು ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಡೆಂಗ್ ಹಾಗೂ ಚಿಕುಂಗುನ್ಯ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯ ಪ್ರಯತ್ನದೊಂದಿಗೆ ಸಮುದಾಯದ ಸಹಭಾಗಿತ್ವದ ಕುರಿತು ಮನವೊಲಿಕೆ ಮಾಡಿಕೊಡಲಿದ್ದಾರೆ.

ಈ ಪ್ರಯುಕ್ತ ಎಲ್ಲಾ ಗ್ರಾಮಗಳು, ಪಟ್ಟಣಗಳು ಹಾಗೂ ನಗರ ಪ್ರದೇಶ ಗಳಲ್ಲಿ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿ ತಾಣಗಳ ನಾಶ ಕಾರ್ಯ ನಡೆಸಲಾಗುವುದು. ನಗರ ಹಾಗೂ ಪಟ್ಟಣ ಪ್ರದೇಶಗಳ ಸಮಸ್ಯಾತ್ಮಕ ಪ್ರದೇಶಗಳನ್ನು ಆದ್ಯತೆಯ ಮೇಲೆ ಗುರುತಿಸಿ ಹೆಚ್ಚಿನ ನಿಗಾವಹಿಸಲಾಗುವುದು.ಎಲ್ಲಾ ಮನೆಗಳು, ಶಾಲಾ ಕಾಲೇಜುಗಳು, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‌ಗಳು, ಖಾಸಗಿ/ಸರಕಾರಿ ಕಛೇರಿಗಳ ಆವರಣ, ಕೈಗಾರಿಕೆ ಹಾಗೂ ಪ್ಯಾಕ್ಟರಿಗಳ ಆವರಣ, ವ್ಯಾಪಾರ ಸ್ಥಳ, ವಾಣಿಜ್ಯ ಸಂಕೀರ್ಣಗಳು, ಹೋಟೇಲ್‌ಗಳು, ಸಂತೆ ಮಾರ್ಕೆಟ್‌ಗಳು, ನಿರ್ಮಾಣ ಹಂತದ ಕಟ್ಟಡಗಳು, ಅಪಾರ್ಟ್ ಮೆಂಟ್‌ಗಳು, ಸಿನೇಮಾ ಥಿಯೇಟರ್‌ಗಳು ಇತ್ಯಾದಿ ಎಲ್ಲಾ ಸ್ಥಳಗಳನ್ನು ಒಳಗೊಂಡು ಸಮೀಕ್ಷೆ ಮಾಡಲಾಗುತ್ತದೆ.

ಈ ಎಲ್ಲ ಸ್ಥಳಗಳಿಗೆ ಭೇಟಿ ನೀಡಿ 14 ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾವಳಿ ಯಂತೆ (ಪ್ರತಿ ಮನೆಗೆ ಒಂದು ಪ್ರಶ್ನಾವಳಿ) ಸಾರ್ವಜನಿಕರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದು ಮುದ್ರಿತ ನಮೂನೆಯಲ್ಲಿ ದಾಖಲಿಸಿ ಅಂಕಗಳನ್ನು ನೀಡಲಾಗುವುದು. ಇದರೊಂದಿಗೆ ಈ ಸ್ಥಳದಲ್ಲಿ ಲಾರ್ವಾ ಸಮೀಕ್ಷೆ ನಡೆಸಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ, ಉತ್ತಮ ಅಂಕಗಳನ್ನು ಪಡೆದ ಮನೆ ಗಳಿಗೆ, ಗ್ರಾಮಗಳಿಗೆ, ಗ್ರಾಪಂಗಳಿಗೆ, ಸರಕಾರಿ ಕಛೇರಿಗಳಿಗೆ ಹಾಗೂ ಇತರೆ ಆವರಣಗಳಿಗೆ ಜಿಲ್ಲಾಧಿಕಾರಿ/ಮುಖ್ಯ ಕಾರ್ಯನಿರ್ವಹಣಾಧಿಕಾರಿ/ತಹಶೀ ಲ್ದಾರ್‌ರವರಿಂದ ಮೆಚ್ಚುಗೆ ಪತ್ರವನ್ನು ನೀಡಲಾಗುವುದು.

ಸಮೀಕ್ಷೆಯ ಸಂದರ್ಭದಲ್ಲಿ ಆಶಾ ಹಾಗೂ ಸ್ವಯಂ ಸೇವಕರು ಮಾಹಿತಿ ಸಂಗ್ರಹಣೆಯ ಜೊತೆಗೆ ಲಾರ್ವಾ ಉತ್ಪತ್ತಿ ತಾಣವನ್ನು ನಾಶಪಡಿಸಿ, ಅಗತ್ಯ ಸಂದರ್ಭಗಳಲ್ಲಿ ಟೆಮಿಪಾಸ್ ದ್ರಾವಣವನ್ನು ತಮ್ಮಾಂದಿಗೆ ಒಯ್ದು ಹಾಕುವುದು ಹಾಗೂ ಸೂಕ್ತ ಆರೋಗ್ಯ ಶಿಕ್ಷಣ ನೀಡಲಿದ್ದಾರೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News