ಎಸ್‌ಸಿ/ಎಸ್‌ಟಿಯಿಂದ 'ಕೆನೆ ಪದರ' ಹೊರಗೆ: ಸುಪ್ರೀಂ ಕೋರ್ಟ್‌ನಲ್ಲಿ ಮರು ಪರಿಶೀನಾ ಅರ್ಜಿ ಸಲ್ಲಿಸಿದ ಕೇಂದ್ರ

Update: 2019-12-02 16:29 GMT

ಹೊಸದಿಲ್ಲಿ, ಡಿ. 2: ಮೀಸಲಾತಿ ಸೌಲಭ್ಯ ನೀಡುವ ಸಂದರ್ಭ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 'ಕೆನೆಪದರ'ವನ್ನು ಹೊರಗಿಡುವ ಕುರಿತು 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮರು ಪರಿಶೀಲಿಸುವಂತೆ ಕೇಂದ್ರ ಸರಕಾರ ಸೋಮವಾರ ಮನವಿ ಮಾಡಿದೆ.

   2018ರ ಜರ್ನೈಲ್ ಸಿಂಗ್ ಪ್ರಕರಣದಲ್ಲಿ ಐವರು ನ್ಯಾಯಾಧೀಶರನ್ನು ಒಳಗೊಂಡ ಪೀಠದ ತೀರ್ಪಿನ ನಿಖರತೆ ಬಗ್ಗೆ ಅನುಮಾನಗಳಿವೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠದ ಮುಂದೆ ವಾದಿಸಿದ್ದಾರೆ.

 ಈ ಪ್ರಕರಣವನ್ನು ವಿಸ್ತೃತ ಪೀಠ ವಿಚಾರಣೆ ನಡೆಸಬೇಕು. ಈ ಹಿಂದೆ ಐವರು ಸದಸ್ಯರ ಪೀಠ ವಿಚಾರಣೆ ನಡೆಸಿತ್ತು. ಆದರೆ, 7 ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಬೇಕು ಎಂದು ಬಯಸುತ್ತೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಕೆನೆಪದರ ಪರಿಕಲ್ಪನೆ ಅನ್ವಯಿಸಲು ಸಾಧ್ಯವಿಲ್ಲ ಎಂದು ವೇಣುಗೋಪಾಲ್ ಹೇಳಿದ್ದಾರೆ.

ಸಮತಾ ಆಂದೋಲನ ಸಮಿತಿಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಈ ವಾದವನ್ನು ವಿರೋಧಿಸಿದ್ದಾರೆ. ಈ ಸಮಿತಿ ರಾಜಸ್ಥಾನದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವನ್ನು ಪ್ರತಿನಿಧಿಸುತ್ತದೆ. ಜರ್ನೈಲ್ ಸಿಂಗ್ ತೀರ್ಪು ತುಂಬಾ ಸ್ಪಷ್ಟವಾಗಿದೆ. ಯಾವುದೇ ಅನುಮಾನ ಇಲ್ಲ. ಈ ಪ್ರಕರಣವನ್ನು ಮುಂದುವರಿಸುವ ಅಗತ್ಯ ಇಲ್ಲ ಎಂದು ಶಂಕರನಾರಾಯಣ ವಾದಿಸಿದರು.

ತೀರ್ಪಿನ ಕುರಿತು ಪ್ರತಿವರ್ಷ ಮರು ಪರಿಶೀಲನೆ ನಡೆಸಲು ಸಾಧ್ಯವಿಲ್ಲ. 2018ರ ತೀರ್ಪು 'ಕೆನೆಪದರ' ಪರಿಕಲ್ಪನೆಯ ಕುರಿತು ಸ್ಪಷ್ಟವಾಗಿ ಹೇಳಿದೆ. ಆದುದರಿಂದ ಪುನರ್ ಪರಿಶೀಲನೆಯಲ್ಲಿ ಯಾವುದೇ ಅರ್ಥ ಇಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News