ರಾಹುಲ್ ಬಜಾಜ್ ಹೇಳಿಕೆಗೆ ಮಹತ್ವ ನೀಡಿದಲ್ಲಿ ದೇಶದ ಹಿತಾಸಕ್ತಿಗೆ ಧಕ್ಕೆ: ನಿರ್ಮಲಾ ಸೀತಾರಾಮನ್

Update: 2019-12-02 17:02 GMT

ಹೊಸದಿಲ್ಲಿ,ಡಿ.2: ಭಾರತೀಯ ಉದ್ಯಮವಲಯವು ನರೇಂದ್ರ ಮೋದಿ ಸರಕಾರವನ್ನು ಟೀಕಿಸಲು ಭಯಪಡುತ್ತವೆ ಎಂಬ ಬಜಾಜ್ ಸಮೂಹ ಸಂಸ್ಥೆಯ ಚೇರ್‌ಮನ್ ರಾಹುಲ್ ಬಜಾಜ್ ಅವರ ಹೇಳಿಕೆಗೆ ಮಹತ್ವ ನೀಡಿದಲ್ಲಿ ಅದು ದೇಶದ ಹಿತಾಸಕ್ತಿಗೆ ಧಕ್ಕೆಯುಂಟು ಮಾಡಬಲ್ಲದು ಎಂದು ಟೀಕಿಸಿದ್ದಾರೆ.

 ‘‘ಬಜಾಜ್ ಎತ್ತಿರುವ ಪ್ರಶ್ನೆಗಳಿಗೆ ಗೃಹ ಸಚಿವ ಅಮಿತ್ ಅವರು ಸೂಕ್ತ ಉತ್ತರ ನೀಡಿದ್ದಾರೆ. ಸರಕಾರವು ಪ್ರಶ್ನೆಗಳು/ಟೀಕೆಗಳನ್ನು ಆಲಿಸುತ್ತದೆ ಹಾಗೂ ಅವುಗಳಿಗೆ ಉತ್ತರಿಸಲಾಗುತ್ತದೆ ಅಥವಾ ಸ್ಪಂದಿಸಲಾಗುತ್ತದೆ ಎಂದವರು ಟ್ವೀಟ್ ಮಾಡಿದ್ದಾರೆ.

‘‘ಒಬ್ಬನ ವೈಯಕ್ತಿಕ ಅಭಿಪ್ರಾಯಗಳನ್ನು ಹರಡುವ ಬದಲು ಅವುಗಳಿಗೆ ಉತ್ತರವನ್ನು ಕಂಡುಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಇಂತಹ ಅಭಿಪ್ರಾಯಗಳಿಗೆ ಮಹತ್ವ ನೀಡಿದಲ್ಲಿ ಅವು ದೇಶದ ಹಿತಾಸಕ್ತಿಗೆ ಧಕ್ಕೆಯುಂಟು ಮಾಡುತ್ತದೆ ’’ಎಂದು ಸೀತಾರಾಮನ್ ಟ್ವಿಟರ್‌ನಲ್ಲಿ ಅಭಿಪ್ರಾಯಿಸಿದ್ದಾರೆ. ಮೋದಿ ಸರಕಾರವನ್ನು ಟೀಕಿಸಲು ಭಾರತದ ಉದ್ಯಮಪತಿಗಳು ಹೆದರುತ್ತಿದ್ದಾರೆ. ಯಾಕೆಂದರೆ ಸರಕಾರವು ಇಂತಹ ಯಾವುದೇ ಟೀಕೆಯನ್ನು ಸ್ವೀಕರಿಸುತ್ತದೆಯೆಂಬ ಆತ್ಮವಿಶ್ವಾಸ ಅವರಿಗಿಲ್ಲ ಎಂದು ರಾಹುಲ್ ಬಜಾಜ್ ಮುಂಬೈನಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ನೀಡಿದ ಹೇಳಿಕೆಗೆ ನಿರ್ಮಲಾ ಹೀಗೆ ಪ್ರತಿಕ್ರಿಯಿಸಿದ್ದಾರೆ.

 ಬಜಾಜ್ ಅವರ ಆತಂಕಕ್ಕೆ ಉತ್ತರಿಸಿದ್ದ ಅಮಿತ್ ಶಾ ಅವರು ಭಾರತೀಯ ಉದ್ಯಮರಂಗವು ಭಯಪಡುವ ಅಗತ್ಯವಿಲ್ಲ ಎಂದಿದ್ದರು. ‘‘ ಕೇಂದ್ರ ಸರಕಾರವು ಮಾಧ್ಯಮಗಳಲ್ಲಿ ಟೀಕಿಸಲ್ಪಡುತ್ತಿದೆ. ಒಂದು ವೇಳೆ ಭಯಪಡುವಂತಹ ವಾತಾವರಣವಿದೆಯೆಂದು ನೀವು ಅಂದುಕೊಂಡಿದ್ದರೆ, ಅದನ್ನು ಸುಧಾರಿಸಲು ನಾವು ಶ್ರಮಿಸಬೇಕಾಗಿದೆ’’ ಎಂದು ಶಾ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News