ಆರ್ಥಿಕತೆಯ ಬಗ್ಗೆ ಯಾವುದೇ ಟೀಕೆಗಳನ್ನು ಆಲಿಸಲು ಸರಕಾರ ತಯಾರಿಲ್ಲ: ಬಯೋಕಾನ್ ಮುಖ್ಯಸ್ಥೆ ಕಿರಣ್ ಶಾ

Update: 2019-12-02 17:17 GMT
ಫೋಟೊ ಕೃಪೆ: Hindustan Times

ಹೊಸದಿಲ್ಲಿ,ಡಿ.2: ನರೇಂದ್ರ ಮೋದಿ ಸರಕಾರವು ತನ್ನ ನೀತಿಗಳು ಹಾಗೂ ನಿರ್ಧಾರಗಳ ಕುರಿತು ವ್ಯಕ್ತವಾಗುವ ಟೀಕೆಗಳಿಗೆ ಹೆಚ್ಚು ಮುಕ್ತಮನಸ್ಸು ಹೊಂದಿರಬೇಕು ಎಂಬ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಅವರ ಅಭಿಪ್ರಾಯವನ್ನು ಉದ್ಯಮಿ, ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಝುಂದಾರ್ ಶಾ ಬೆಂಬಲಿಸಿದ್ದಾರೆ.

ಕೇಂದ್ರ ಸರಕಾರವು ಭಾರತೀಯ ಉದ್ಯಮರಂಗದ ಆಶಯಗಳಿಗೆ ಸ್ಪಂದಿಸಬೇಕು ಹಾಗೂ ಕುಸಿಯುತ್ತಿರುವ ಭಾರತದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಜೊತೆಗೂಡಿ ಶ್ರಮಿಸಬೇಕು ಎಂದು ಕಿರಣ್ ರವಿವಾರ ಟ್ವೀಟ್ ಮಾಡಿದ್ದಾರೆ.

‘‘ಸರಕಾರವು ಭಾರತದ ಉದ್ಯಮವಲಯಕ್ಕೆ ಸ್ಪಂದಿಸುವುದೆಂಬ ಭರವಸೆ ಹೊಂದಿದ್ದೇವೆ. ಖರೀದಿಸುವಿಕೆ ಹಾಗೂ ಬೆಳವಣಿಗೆಯನ್ನು ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ಮಾರ್ಗೊಪಾಯಗಳನ್ನು ಕಂಡುಹಿಡಿಯಬೇಕಾಗಿದೆ. ಈಗ ನಾವೆಲ್ಲರೂ ಅಸ್ಪೃಶ್ಯರಾಗಿಬಿಟ್ಟಿದ್ದೇವೆ ಹಾಗೂ ದೇಶದ ಆರ್ಥಿಕತೆಯ ಬಗ್ಗೆ ಯಾವುದೇ ರೀತಿಯ ಟೀಕೆಗಳನ್ನು ಆಲಿಸಲು ನಮ್ಮ ಸರಕಾರ ಬಯಸುತ್ತಿಲ್ಲ’’ ಎಂದು ಶಾ ಟ್ವೀಟ್ ಮಾಡಿದ್ದಾರೆ.

 ಇಕಾನಾಮಿಕ್ ಟೈಮ್ಸ್ ಪತ್ರಿಕೆಯು ಮುಂಬೈನಲ್ಲಿ ಆಯೋಜಿಸಿದ್ದ ಸಮಾರಂಭವೊಂದರಲ್ಲಿ 81 ವರ್ಷ ವಯಸ್ಸಿನ ರಾಹುಲ್ ಬಜಾಜ್ , ತನ್ನ ಭಾಷಣದಲ್ಲಿ ‘‘ಒಂದು ವೇಳೆ ನಾವು ನಿಮ್ಮನ್ನು ಟೀಕಿಸಿದಲ್ಲಿ, ನೀವು ಅದನ್ನು ಮೆಚ್ಚುವಿರಿ ಎಂಬ ಆತ್ಮವಿಶ್ವಾಸ ನಮಗಿಲ್ಲ’’ ಎಂದು ಹೇಳಿದ್ದರು.

ಯುಪಿಎ ಸರಕಾರವಿದ್ದಾಗ ನಮಗೆ ಬೇಕಿದ್ದಲ್ಲಿ ಯಾರನ್ನಾದರೂ ಟೀಕಿಸಬಹುದಾಗಿತ್ತು ಎಂದವರು ಹೇಳಿದ್ದರು.

 ರಾಹುಲ್ ಬಜಾಜ್ ಅವರ ಅನಿಸಿಕೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಧ್ವನಿಗೂಡಿಸಿದ್ದಾರೆ. ಸಮಾಜದಲ್ಲಿ ನೆಲೆಸಿರುವ ಭೀತಿಯ ವಾತಾವರಣವನ್ನು ಆತ್ಮವಿಶ್ವಾಸದ ವಾತಾವರಣವಾಗಿ ಮಾರ್ಪಡಿಸಬೇಕೆಂದು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ನೀಡಿದ್ದಾರೆ.

 ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನವು ಶೇ.4.5ಕ್ಕೆ ಕುಸಿದಿದ್ದು, ಇದು ಆರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಎಂದು ಸರಕಾರ ಶುಕ್ರವಾರ ಬಿಡುಗಡೆಗೊಳಿಸಿದ ದತ್ತಾಂಶಗಳು ಬಹಿರಂಗಪಡಿಸಿವೆ.

ಭಾರತದ ಬೆಳವಣಿಗೆ ದರವು 2019-20ರ ಸಾಲಿನಲ್ಲಿ ಶೇ.5.6 ಆಗಲಿದೆಯೆಂದು ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಕಳೆದ ತಿಂಗಳು ಮೂಡೀಸ್ ಭವಿಷ್ಯ ನುಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News