ರಕ್ಷಣಾ ವಲಯದಲ್ಲಿ ‘ಮೇಕ್ ಇನ್ ಇಂಡಿಯಾ’ ಮಂದಗತಿ

Update: 2019-12-02 17:42 GMT

ಹೊಸದಿಲ್ಲಿ, ಡಿ.2: ಕಳೆದ ಆರು ವರ್ಷಗಳಲ್ಲಿ ಭಾರತದ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ವಲಯದಲ್ಲಿ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಡಿ ಯಾವುದೇ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿಲ್ಲವೆಂದು ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯೊಂದು ಬಹಿರಂಗಪಡಿಸಿದೆ.

ನೂತನ ತಲೆಮಾರಿನ ಸ್ಟೆಲ್ತ್ ಜಲಾಂತರ್ಗಾಮಿ ನೌಕೆಗಳು, ಬಾಂಬ್ ಶೋಧಕಗಳು ಹಾಗೂ ಲಘು ಬಳಕೆಯ ಹೆಲಿಕಾಪ್ಟರ್ ‌ಗಳು, ಪದಾತಿದಳದ ಯುದ್ಧ ವಾಹನಗಳು, ಸಾರಿಗೆ ವಿಮಾನ ಹಾಗೂ ಫೈಟರ್ ಜೆಟ್‌ಗಳನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ಉತ್ಪಾದಿಸುವ ಗುರಿಯನ್ನು ಹೊಂದಲಾಗಿತ್ತು. ಆದರೆ ಇವ್ಯಾವುದೂ ಕಾರ್ಯಗತಗೊಳ್ಳದೆ ನೆನೆಗುದಿಗೆ ಬಿದ್ದಿದೆ. ಹಾಗೂ ಇವುಗಳ ಉತ್ಪಾದನೆಯನ್ನು ಆರಂಭಿಸುವ ಗುತ್ತಿಗೆ ಒಪ್ಪಂದಗಳಿಗೆ ಇನ್ನೂ ಸಹಿಹಾಕಲಾಗಿಲ್ಲವೆಂದು ವರದಿಯು ತಿಳಿಸಿದೆ.

ಆದರೆ ಮೇಕ್ ಇನ್ ಇಂಡಿಯಾ ಯೋಜನೆಯಡಿ, ಕಲಾಶ್ನಿಕೋವ್ ಎಕೆ 303 ಅಸಾಲ್ಟ್ ರೈಫಲ್‌ ಗಳನ್ನು ಅಮೇಠಿಯ ಕಾರ್ಖಾನೆಯಲ್ಲಿ ತಯಾರಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರೆಯುವ ಸಾಧ್ಯತೆಯಿದೆಯೆಂದು ವರದಿ ತಿಳಿಸಿದೆ.

2017ರಿಂದೀಚೆಗೆ ಆರು ಪ್ರಮುಖ ‘ಮೇಕ್ ಇನ್ ಇಂಡಿಯಾ’ ಪ್ರಾಜೆಕ್ಟ್‌ಗಳು ಅಧಿಕಾರಶಾಹಿಯ ಕೆಂಪುಪಟ್ಟಿಯಡಿ ಸಿಲುಕಿದೆ ಹಾಗೂ ದೀರ್ಘವಾದ ವಿಧಿವಿಧಾನಗಳಿಂದಾಗಿ ಅವುಗಳ ಉತ್ಪಾದನೆಯ ಆರಂಭಕ್ಕೆ ಅಡ್ಡಿಯುಂಟಾಗಿದೆಯೆಂದು ವರದಿಗಳು ತಿಳಿಸಿವೆ.

ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಭೂಸೇನೆ ಹಾಗೂ ವಾಯುಪಡೆಗಾಗಿ ಬಹುಉದ್ದೇಶದ 200 ಕಾಮೊವ್ ಕೆಎ-226ಟಿ ಲಘು ಹೆಲಿಕಾಪ್ಟರ್‌ಗಳನ್ನು ರಶ್ಯದ ಜೊತೆಗೂಡಿ ನಿರ್ಮಿಸುವ ಯೋಜನೆಯನ್ನು ಕೂಡಾ ಹಮ್ಮಿಕೊಳ್ಳಲಾಗಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News