ಕಠಿಣ ಕಾನೂನು ಜಾರಿ ಚರ್ಚೆಗೆ ಸರಕಾರ ಸಿದ್ಧವಿದೆ: ರಾಜನಾಥ ಸಿಂಗ್

Update: 2019-12-02 17:53 GMT

ಹೊಸದಿಲ್ಲಿ, ಡಿ.2: ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಘಟನೆಗಳ ವಿರುದ್ಧ ಲೋಕಸಭೆಯಲ್ಲಿ ಸೋಮವಾರ ಸದಸ್ಯರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದೇ ವೇಳೆ ತಾನು ಚರ್ಚೆಗೆ ಮತ್ತು ಇಂತಹ ಘಟನೆಗಳನ್ನು ತಡೆಯಲು ಕಾನೂನುಗಳಲ್ಲಿಯ ಕಠಿಣ ನಿಯಮಗಳನ್ನು ಕಂಡುಕೊಳ್ಳಲು ಸಿದ್ಧವಿರುವುದಾಗಿ ಕೇಂದ್ರವು ತಿಳಿಸಿತು.

ಹೈದರಾಬಾದ್ ಘಟನೆಯ ಹಿನ್ನೆಲೆಯಲ್ಲಿ ಶೂನ್ಯವೇಳೆಯಲ್ಲಿ ಚರ್ಚೆಗೆ ಉತ್ತರಿಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು,ಈ ಘೋರ ಅಪರಾಧವನ್ನು ಖಂಡಿಸಲು ತನಗೆ ಶಬ್ದಗಳೇ ಸಿಗುತ್ತಿಲ್ಲ. ಈ ಘಟನೆ ಪ್ರತಿಯೊಬ್ಬರನ್ನೂ ನೋಯಿಸಿದೆ. ಇಂತಹ ಕ್ರೂರ ಘಟನೆಗಳನ್ನು ತಡೆಯಲು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನುಗಳಲ್ಲಿ ಯ ಅವಕಾಶಗಳನ್ನು ಅನ್ವೇಷಿಸಲು ಚರ್ಚೆಗೆ ಸರಕಾರವು ಸಿದ್ಧವಿದೆ ಎಂದು ತಿಳಿಸಿದರು.

ನಿರ್ಭಯಾ ಘಟನೆಯ ಬಳಿಕ ಕಠಿಣ ಕಾನೂನನ್ನು ರೂಪಿಸಿದ್ದರೂ ಇಂತಹ ಘೋರ ಅಪರಾಧಗಳು ನಡೆಯುತ್ತಲೇ ಇವೆ ಎಂದರು.

ಹೈದರಾಬಾದ್ ಘಟನೆಯನ್ನು ಯಾತನಾದಾಯಕ ಮತ್ತು ಅಮಾನವೀಯ ಎಂದು ಬಣ್ಣಿಸಿದ ಉತ್ತಮ ಕುಮಾರ ರೆಡ್ಡಿ (ಕಾಂಗ್ರೆಸ್) ಅವರು,ಘಟನೆಯ ಬಳಿಕ ಸಂವೇದನಾಶೂನ್ಯ ಹೇಳಿಕೆಯನ್ನು ನೀಡಿದ್ದಕ್ಕಾಗಿ ತೆಲಂಗಾಣ ಗೃಹಸಚಿವರನ್ನು ತರಾಟೆಗೆತ್ತಿಕೊಂಡರು. ಪ್ರಕರಣವನ್ನು ದಾಖಲಿಸಿಕೊಳ್ಳಲು ವಿಳಂಬಿಸಿದ್ದಕ್ಕಾಗಿ ರಾಜ್ಯ ಪೊಲೀಸರ ವಿರುದ್ಧವೂ ಅವರು ದಾಳಿ ನಡೆಸಿದರು.

ತೆಲಂಗಾಣದಲ್ಲಿ ಮದ್ಯ ಮಾರಾಟವು ಈ ದುರದೃಷ್ಟಕರ ಘಟನೆಗೆ ಕಾರಣವಾಗಿದೆ ಎಂದು ಅವರು,ಶೀಘ್ರ ತೀರ್ಪು ಹೊರಬೀಳಲು ಮತ್ತು ಆರೋಪಿಗಳನ್ನು ಗಲ್ಲಿಗೇರಿಸುವಂತಾಗಲು ತ್ವರಿತ ನ್ಯಾಯಾಲಯವನ್ನು ಸ್ಥಾಪಿಸುವಂತೆ ಆಗ್ರಹಿಸಿದರು.

ಕೊಯಮತ್ತೂರಿನಲ್ಲಿ ಶಾಲಾ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ಪ್ರಸ್ತಾಪಿಸಿದ ಟ.ಆರ್.ಬಾಲು (ಡಿಎಂಕೆ) ಅವರು,ಅಪರಾಧಿಗಳನ್ನು ಶಿಕ್ಷೆಗೊಳಪಡಿಸಬೇಕು ಎಂದರು. ಸರಕಾರವು ಕಾಲ ನಿಗದಿತ ಕ್ರಮವನ್ನು ಖಚಿತ ಪಡಿಸಬೇಕೆಂದು ಅವರು ಆಗ್ರಹಿಸಿದರು.

  ಹೈದರಾಬಾದ್ ಘಟನೆಯನ್ನು ಘೋರ ಅಪರಾಧವೆಂದು ಬಣ್ಣಿಸಿದ ಸೌಗತ ರಾಯ್ (ಟಿಎಂಸಿ) ಅವರು,ಸದನವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವಂತಾಗಲು ಕಾನೂನನ್ನು ಶೀಘ್ರವೇ ರೂಪಿಸುವಂತೆ ಅವರು ಕೇಂದ್ರವನ್ನು ಆಗ್ರಹಿಸಿದರು.

ಇಂತಹ ಕ್ರೂರ ಘಟನೆಗಳು ದೇಶದಲ್ಲಿ ಕೆಟ್ಟ ವಾತಾವರಣವನ್ನು ಸೃಷ್ಟಿಸುತ್ತವೆ ಎಂದ ಬಂಡಿ ಸಂಜಯಕುಮಾರ (ಬಿಜೆಪಿ) ಅವರು,ಇಂತಹ ಘಟನೆಗಳು ನಡೆದಾಗ ಸ್ಥಳದಲ್ಲಿಯೇ ಶಿಕ್ಷೆಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದರು.

ಪಿನಾಕಿ ಮಿಶ್ರಾ (ಬಿಜೆಡಿ) ಅವರು ನಿರ್ಭಯಾ ಸಾಮೂಹಿಕ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಿಗೆ ಮರಣದಂಡನೆ ಜಾರಿಗೊಳಿಸುವಲ್ಲಿ ವಿಳಂಬವನ್ನು ಪ್ರಶ್ನಿಸಿದರೆ,ಸುಪ್ರಿಯಾ ಸುಳೆ (ಎನ್‌ಸಿಪಿ) ಅವರು,ಇಂತಹ ಘಟನೆಗಳನ್ನು ಎಳ್ಳಷ್ಟೂ ಸಹಿಸಕೂಡದು ಎಂದು ಪ್ರತಿಪಾದಿಸಿದರು.

ಘಟನೆಯ ಕುರಿತು ದುಃಖ ವ್ಯಕ್ತಪಡಿಸಿದ ಸ್ಪೀಕರ್ ಓಂ ಬಿರ್ಲಾ ಅವರು,ಇಂತಹ ಘಟನೆಗಳನನ್ನು ಖಂಡಿಸುವಲ್ಲಿ ನಾವು ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News