ಕುಂದು ಕೊರತೆಗಳ ನಡುವೆಯೂ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಉತ್ತಮ ಸ್ಪಂದನೆ

Update: 2019-12-03 05:48 GMT

ಸುಳ್ಯ, ಡಿ.3: ಇಲ್ಲಿನ ಗಾಂಧಿನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕರ ಮತ್ತು ಪೋಷಕರ ಸಹಕಾರದಿಂದ ಕೊರತೆಗಳ ನಡುವೆಯೂ ಸಾಂಗವಾಗಿ ನಡೆಯುತ್ತಿದ್ದು, ಉತ್ತಮ ಸ್ಪಂದನೆ ಲಭಿಸುತ್ತಿದೆ.

ಸರಕಾರ ಕನಿಷ್ಠ 30 ಮಕ್ಕಳನ್ನು ಒಳಗೊಂಡಂತೆ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶ ನೀಡಿದ್ದು, ಅದರಂತೆ 2019-20ನೇ ಸಾಲಿನಲ್ಲಿ ಸುಳ್ಯದ ಗಾಂಧಿನಗರ ಪಪೂ ಕಾಲೇಜು ಈ ಯೋಜನೆಯಡಿಗೆ ಸೇರ್ಪಡೆಗೊಂಡಿತ್ತು. 1ನೇ ತರಗತಿಯ ಇಂಗ್ಲಿಷ್ ಮಾಧ್ಯಮಕ್ಕೆ 24 ಮತ್ತು ಕನ್ನಡ ಮಾಧ್ಯಮಕ್ಕೆ 6 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದು, ಎರಡೂ ವಿಭಾಗಗಳಲ್ಲಿ ಶಿಕ್ಷಣ ನೀಡುವ ಮೂಲಕ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೊಸ ಪ್ರಯೋಗಕ್ಕೆ ಉತ್ತಮ ಸ್ಪಂದನೆ ಲಭಿಸಿದೆ. ಶಾಲೆಗಳ ತರಗತಿಗಳ ವೇಳೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಬಿಸಿಯೂಟ ಯೋಜನೆಯಲ್ಲೇ ಅನ್ನದಾಸೋಹ ನಡೆಯುತ್ತಿದೆ. ಆಂಗ್ಲಮಾಧ್ಯಮದಲ್ಲಿ ಒಂದು ಪಠ್ಯಪುಸ್ತಕ ಕನ್ನಡದಲ್ಲಿದ್ದು, ಉಳಿದೆಲ್ಲ ಪಠ್ಯ ಪುಸ್ತಕಗಳು ಆಂಗ್ಲ ಮಾಧ್ಯಮದಲ್ಲಿದೆ. ಆಂಗ್ಲಮಾಧ್ಯಮ ವಿಭಾಗಕ್ಕೆ ನುರಿತ ಮತ್ತು ತರಬೇತಿ ಪಡೆದ ಶಿಕ್ಷಕರ ನೇಮಕ ಮಾಡಿರುವುದರಿಂದ ಮಕ್ಕಳು ಕನ್ನಡದ ಜೊತೆಗೆ ಇಂಗ್ಲಿಷ್‌ನ್ನು ಬರೆಯಲು, ಮಾತನಾಡಲು ಕಲಿಯುತ್ತಿದ್ದಾರೆ. ಈಗಾಗಲೇ ಸರಕಾರದಿಂದ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿದೆ. ಆಂಗ್ಲ ಮಾಧ್ಯಮಕ್ಕೆ ಸರಕಾರದಿಂದ ಒಬ್ಬ ಶಿಕ್ಷಕಿಯನ್ನು ನಿಯೋಜನೆ ಮಾಡಲಾಗಿದ್ದು, ಅಲ್ಲದೆ ಎಸ್‌ಡಿಎಂಸಿಯವರು ಇಬ್ಬರು ಶಿಕ್ಷಕಿಯರು ಮತ್ತು ಒಬ್ಬ ಆಯಾರನ್ನು ನೇಮಕ ಮಾಡಿದ್ದಾರೆ.

1961ರಲ್ಲಿ ಆರಂಭವಾದ ಈ ಶಾಲೆಯು 3.60 ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲೀಗ ಎಲ್‌ಕೆಜಿ, ಆಂಗ್ಲಮಾಧ್ಯಮ, ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿಭಾಗಗಳಿವೆ. ಪ್ರಾಥಮಿಕ ವಿಭಾಗದಲ್ಲಿ 172 ಮತ್ತು 1983ರಲ್ಲಿ ಆರಂಭವಾದ ಪ್ರೌಢಶಾಲಾ ವಿಭಾಗದಲ್ಲಿ 125 ಮತ್ತು ಪದವಿ ಪೂರ್ವ ವಿಭಾಗದಲ್ಲಿ 94 ಸಹಿತ 428 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಉತ್ತಮ ಶಿಕ್ಷಣ ದೊರೆಯತ್ತಿದ್ದರೂ ಸಮಸ್ಯೆಗಳ ಆಗರ

ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದ್ದರೂ ಹಲವು ಸಮಸ್ಯೆಗಳ ಆಗರವಾಗಿದೆ. ಅಂದರೆ, ಮೂಲಭೂತ ಸೌಲಭ್ಯಗಳ ಕೊರೆತ ಎದ್ದು ಕಾಣುತ್ತಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಸರಕಾರದ ನಿಯಮದ ಪ್ರಕಾರ 5 ಲಕ್ಷ ರೂ. ಅನುದಾನ ಬರಬೇಕಿತ್ತು. ಆದರೆ ಇಲ್ಲಿಗೆ ಕೇವಲ 2 ಲಕ್ಷ ರೂ. ಮಾತ್ರ ಬಂದಿದೆ. ಇದನ್ನು ಶಿಕ್ಷಕಿಯರ ವೇತನಕ್ಕೆ ಮಾತ್ರ ಬಳಸಲಾಗುತ್ತಿದೆ. ಹಳೆಯ ಕಟ್ಟಡದಲ್ಲೇ ಪ್ರಾಥಮಿಕ ತರಗತಿಗಳು ನಡೆಯುತ್ತಿವೆ. ಇದರಲ್ಲೇ ಆಂಗ್ಲಮಾಧ್ಯಮ ತರಗತಿಯು ನಡೆಯುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುವುದರಿಂದ ಕೊಠಡಿಗಳ ಸಮಸ್ಯೆ ಎದುರಾಗಿದೆ. ಸಲಕರಣೆಗಳಿಗೆ ಅನುದಾನ ಕೂಡ ಬಂದಿಲ್ಲ. ಪಿಯು ವಿಭಾಗದ ಕಟ್ಟಡಗಳು ಅರ್ಧದಲ್ಲಿವೆ. ಶಾಲೆಯ ದುರಸ್ತಿಗೆ ಈಗಾಗಲೇ 22 ಲಕ್ಷ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾ ಗಿದೆ. ಅಲ್ಲದೆ ಶೌಚಾಲಯದ ಕೊರತೆ ಕಾಡುತ್ತಿದೆ. ಮಕ್ಕಳಿಗೆ ಸ್ವಚ್ಛ್ಚ ಕುಡಿಯುವ ನೀರಿನ ಸೌಲಭ್ಯ ಕೂಡ ಇಲ್ಲ

ಶಿಕ್ಷಕರ ಕೊರತೆಯೂ ಇಲ್ಲಿದ್ದು, ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಗಾಂಧಿನಗರದ ಈ ಶಾಲೆಯು ಪರೀಕ್ಷಾ ಕೇಂದ್ರ ಕೂಡ ಆಗಿರುವುದರಿಂದ ಬೆಂಚ್ ಡೆಸ್ಕ್‌ಗಳ ಕೊರತೆಯೂ ಇದೆ. ಶಾಶ್ವತ ಸಿಬ್ಬಂದಿ ಹುದ್ದೆಗಳು ಖಾಲಿ ಉಳಿದಿದೆ.

ಗಾಂಧಿನಗರ ಪಬ್ಲಿಕ್ ಸ್ಕೂಲ್‌ಗೆ ಗ್ರಾಮೀಣ ಮತ್ತು ನಗರದ ಮಕ್ಕಳು ಬರುತ್ತಿದ್ದಾರೆ. ಕೆಪಿಎಸ್ ನಿಂದ 5 ಲಕ್ಷ ರೂ. ಅನುದಾನದಲ್ಲಿ 2 ಲಕ್ಷ ರೂ. ಬಂದಿದೆ. ಇಲ್ಲಿ ಆರಂಭವಾದ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸಾರ್ವಜನಿಕರು ಉತ್ತಮ ಸ್ಪಂದನೆ ನೀಡುತ್ತಾ ಬಂದಿದ್ದು, ಶಾಲೆಯ ಬೆಳೆವಣಿಗೆಯ ಬಗ್ಗೆ ತುಂಬಾ ನಿರೀಕ್ಷೆ ಇದೆ. ಜನಪ್ರತಿನಿಧಿಗಳು, ಪೋಷಕರ ಸಹಕಾರ ಬೇಕಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಇಲಾಖೆಯ ಸಂಪೂರ್ಣ ಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದೇವೆ.

-ಮಹಾಬಲ ಭಟ್, ಪ್ರಾಂಶುಪಾಲರು ಗಾಂಧಿನಗರ ಪಬ್ಲಿಕ್ ಸ್ಕೂಲ್

ಹಿಂದಿನ ಮೈತ್ರಿ ಸರಕಾರದ ಮಹತ್ವಾಕಾಂಕ್ಷಿಯ ಯೋಜನೆ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾ ಗಿದೆ. ಮುಂದಿನ ವರ್ಷ ಈ ಯೋಜನೆಯನ್ನು ತಾಲೂಕಿನ ಇತರ ಶಾಲೆಗಳಿಗೆ ವಿಸ್ತರಣೆ ಮಾಡಬೇಕು. ಇದರಿಂದ ಖಾಸಗಿ ಶಾಲೆಗಳಲ್ಲಿ ನಡೆಯುತ್ತಿರುವ ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಬೀಳಲಿದೆ.

-ಎಂ.ವೆಂಕಪ್ಪ ಗೌಡ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು

ಸರಕಾರದ ಆದೇಶದಂತೆ ಆಂಗ್ಲ ಮಾಧ್ಯಮ 1ನೇ ತರಗತಿಗೆ 30 ವಿದ್ಯಾರ್ಥಿಗಳು ಸೇರ್ಪಡೆ ಗೊಂಡಿದ್ದಾರೆೆ. ಇಲಾಖೆಯ ಅನುಮತಿ ಪಡೆದು ಎಲ್‌ಕೆಜಿಯನ್ನು ಆರಂಭಿಸಿದ್ದು, 40 ಮಕ್ಕಳಿಗೆ ವಿಶೇಷ ತರಬೇತಿ ಪಡೆದ ಶಿಕ್ಷಕಿಯರಿಂದ ಶಿಕ್ಷಣ ಬೋಧನೆ ನಡೆಯುತ್ತಿದೆ. ಹೆಚ್ಚಿನ ಎಲ್ಲಾ ಮಕ್ಕಳು ಬಡತನದಿಂದ ಬಂದ ಕಾರಣ ಸರಕಾರದ ಯೋಜನೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಸಹಕಾರಿಯಾಗಿದೆ.

-ನಳಿನಿ, ಮುಖ್ಯ ಶಿಕ್ಷಕಿ,


ವಿದ್ಯಾರ್ಥಿಗಳ ಸಂಖ್ಯೆ

ಎಲ್‌ಕೆಜಿ : 40

1ನೇ ತರಗತಿ : 30

2ನೇ ತರಗತಿ : 14

3ನೇ ತರಗತಿ : 23

4ನೇ ತರಗತಿ : 19

5ನೇ ತರಗತಿ : 22

6ನೇ ತರಗತಿ : 38

7ನೇ ತರಗತಿ : 26

ಪ್ರೌಢ ವಿಭಾಗ: 125

ಪಿಯು ವಿಭಾಗ: 94

ಒಟ್ಟು: 428

Writer - ಗಿರೀಶ್ ಅಡ್ಪಂಗಾಯ

contributor

Editor - ಗಿರೀಶ್ ಅಡ್ಪಂಗಾಯ

contributor

Similar News