ಅನುದಾನ ಸಹಿತ ಆಂಗ್ಲ ಮಾಧ್ಯಮದಲ್ಲಿ ಬೋಧನೆ : ಶಿಕ್ಷಕರ ಸಂಘ ಆಗ್ರಹ

Update: 2019-12-03 07:14 GMT

ಮಂಗಳೂರು, ಡಿ.3: ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದೀಗ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿರುವುದರಿಂದ ಅನುದಾನಿತ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಿದೆ. ಹಾಗಾಗಿ ಅನುದಾನಿತ ಶಾಲೆಗಳಲ್ಲಿಯೂ ಅನುದಾನದ ಸಹಿತ ಆಂಗ್ಲ ಮಾಧ್ಯಮ ಬೋಧನೆಗೆ ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಆಗ್ರಹ ಮಾಡಿದ ಸಂಘದ ಅಧ್ಯಕ್ಷ ಕೆ.ಎಂ.ಕೆ. ಮಂಜನಾಡಿ, ಡಿಸೆಂಬರ್ 5ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿರುವ ಅನುದಾನಿತ ಶಿಕ್ಷಕರ ಕ್ಷಕಿರಣ ಸಮ್ಮೇಳನದಲ್ಲಿ ಈ ಬಗ್ಗೆ ಗಮನ ಸೆಳೆಯಲಾಗುವುದು ಎಂದರು.

ಸಮ್ಮೇಳನದಲ್ಲಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರ ಎಂಬ ವಿಷಯದ ಬಗ್ಗೆ ಬದ್ರಿಯ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಎನ್. ಇಸ್ಮಾಯಿಲ್ ಕಾರ್ಯಾಗಾರ ನಡೆಸಲಿರುವರು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಆಲ್ವಿನ್ ಲ್ಯಾನ್ಸಿ ರೋಡ್ರಿಗಸ್, ಕೋಶಾಧಿಕಾರಿ ಸುಬ್ರಾಯ ಕಾರಂತ, ಸಂಯೋಜಕರಾದ ಎಂ.ಎಚ್. ಮಲಾರ್, ಮೇರಿ ಡಿಸೋಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News