ಹವಾಲಾ ತನಿಖೆ: 170 ಕೋ. ರೂ. ಬಗ್ಗೆ ಕಾಂಗ್ರೆಸ್‌ಗೆ ನೋಟಿಸ್

Update: 2019-12-03 15:15 GMT
Photo: PTI

ಹೊಸದಿಲ್ಲಿ, ಡಿ.3: 3,300 ಕೋಟಿ ರೂ. ಮೊತ್ತದ ಬೃಹತ್ ಹವಾಲಾ ಹಗರಣದ ತನಿಖೆಯ ಹಿನ್ನೆಲೆಯಲ್ಲಿ , ಕಾಂಗ್ರೆಸ್ ಪಕ್ಷವು ಸಂಸ್ಥೆಯೊಂದರಿಂದ 170 ಕೋಟಿ ರೂ. ದೇಣಿಗೆ ಪಡೆದಿರುವುದಕ್ಕೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  ಬೃಹತ್ ಉದ್ದಿಮೆ ಸಂಸ್ಥೆಗಳು ತೆರಿಗೆ ತಪ್ಪಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಲ್ಲಿ, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಸರಣಿ ದಾಳಿ ನಡೆಸಿದ್ದರು. ಈ ವೇಳೆ 3,300 ಕೋಟಿ ರೂ. ಮೊತ್ತದ ಬೃಹತ್ ಹವಾಲಾ ಹಗರಣ ಬೆಳಕಿಗೆ ಬಂದಿತ್ತು. ಅಲ್ಲದೆ ಹೈದರಾಬಾದ್ ಮೂಲದ ಸಂಸ್ಥೆಯೊಂದು ತೆರಿಗೆ ವಂಚನೆಯ ಕ್ರಮವಾಗಿ 170 ಕೋಟಿ ರೂ. ಮೊತ್ತವನ್ನು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆಯಾಗಿ ನೀಡಿದೆ ಎಂದು ಆದಾಯ ತೆರಿಗೆ ಇಲಾಖೆಗಳು ತಿಳಿಸಿದ್ದರು.

 ಬೃಹತ್ ಸಂಸ್ಥೆಗಳು ಹಾಗೂ ಹವಾಲಾ ದಂಧೆಕೋರರ ನಡುವಿನ ಸಂಪರ್ಕ ಐಟಿ ದಾಳಿಯಿಂದ ಬೆಳಕಿಗೆ ಬಂದಿದ್ದು ನಕಲಿ ಗುತ್ತಿಗೆ ವ್ಯವಹಾರ ಹಾಗೂ ಬಿಲ್‌ಗಳ ಮೂಲಕ ಹವಾಲಾ ದಂಧೆ ನಡೆಸಲಾಗುತ್ತಿತ್ತು ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News