ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟದಿಂದ ಕಪಟ ರಾಜಕೀಯ : ಪ್ರಧಾನಿ ಮೋದಿ ಟೀಕೆ

Update: 2019-12-03 15:51 GMT
Photo: PTI

 ರಾಂಚಿ, ಡಿ.3: ಜಾರ್ಖಂಡ್‌ನಲ್ಲಿ ವಿಪಕ್ಷ ಜೆಎಂಎಂ- ಕಾಂಗ್ರೆಸ್ ಮೈತ್ರಿಕೂಟದ ಕಪಟ ರಾಜಕೀಯದ ಬಗ್ಗೆ ಜನತೆ ಜಾಗರೂಕರಾಗಿರಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಜನರ ಸೇವೆ ಬಿಜೆಪಿ ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದಿದ್ದಾರೆ.

ಜಾರ್ಖಂಡ್ ವಿಧಾನಸಭೆ ಚುನಾವಣೆಯ ದ್ವಿತೀಯ ಹಂತದ ಪ್ರಚಾರ ಕಾರ್ಯದಲ್ಲಿ ಖುಂಟಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿಯಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದು ಜನರಿಗೆ ಖಾತರಿಯಾಗಿದೆ ಎಂದರು.

ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕಾಶ್ಮೀರ ಸಮಸ್ಯೆ, ಅಯೋಧ್ಯೆ ವಿವಾದವನ್ನು ಮುಂದುವರಿಸಿಕೊಂಡು ಹೋಗಬೇಕೆಂಬುದು ಕಾಂಗ್ರೆಸ್ ಪಕ್ಷದ ಆಶಯವಾಗಿತ್ತು. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಅಯೋಧ್ಯೆ ವಿವಾದಕ್ಕೆ ಶಾಂತಿಯುತ ಪರಿಹಾರ ದೊರಕಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ಬಳಿಕ ಜಮ್ಮು -ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ಹೊಣೆಯನ್ನು ಆದಿವಾಸಿ ಲೆಫ್ಟಿನೆಂಟ್ ಜನರಲ್‌ಗೆ ಒಪ್ಪಿಸಲಾಗಿದೆ ಎಂದವರು ಹೇಳಿದರು.

ರಾಜ್ಯದಲ್ಲಿ ನಿರ್ಣಾಯಕ ಪ್ರಮಾಣದಲ್ಲಿರುವ ಆದಿವಾಸಿಗಳ ಮನಗೆಲ್ಲುವ ಪ್ರಯತ್ನ ನಡೆಸಿದ ಮೋದಿ, ಶ್ರೀರಾಮ ರಾಜಕುಮಾರನಾಗಿದ್ದ ಸಂದರ್ಭ ಅಯೋಧ್ಯೆಯನ್ನು ಬಿಟ್ಟು ವನವಾಸಕ್ಕೆ ತೆರಳಿದ. ಅಲ್ಲಿ 14 ವರ್ಷ ಆದಿವಾಸಿಗಳೊಂದಿಗೆ ಕಳೆದ ಬಳಿಕ ಮರ್ಯಾದಾ ಪುರುಷೋತ್ತಮನಾಗಿ ಅಯೋಧ್ಯೆಗೆ ಮರಳಿದ ಎಂದು ಹೇಳಿದರು. ಅಲ್ಲದೆ ರಾಜ್ಯದಲ್ಲಿ ರಘುಬರ ದಾಸ್ ಸರಕಾರ ಜನಪರ ಆಡಳಿತ ನೀಡಿದ ಜೊತೆಗೆ, ರಾಜ್ಯದಲ್ಲಿದ್ದ ನಕ್ಸಲರ ಬೆನ್ನೆಲುಬನ್ನು ಮುರಿದಿದೆ ಎಂದು ಪ್ರಧಾನಿ ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News