ಇತ್ತೀಚಿಗೆ ನಿಮ್ಮ ವಾಹನವನ್ನು ಮಾರಾಟ ಮಾಡಿದ್ದೀರಾ? ಹಾಗಿದ್ದರೆ ಇದನ್ನು ಖಚಿತಪಡಿಸಿಕೊಳ್ಳಿ

Update: 2019-12-03 16:41 GMT
ಸಾಂದರ್ಭಿಕ ಚಿತ್ರ

ಬೈಕ್ ಅಥವಾ ಕಾರು ಆಗಿರಲಿ,ನೀವು ಇತ್ತೀಚಿಗೆ ನಿಮ್ಮ ವಾಹನವನ್ನು ಇನ್ನೊಬ್ಬರಿಗೆ ಮಾರಾಟ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಅಲ್ಲಿಗೆ ನಿಮ್ಮ ಹೊಣೆಗಾರಿಕೆ ಮುಗಿಯಿತು ಎಂದು ನೀವು ತಿಳಿದುಕೊಂಡಿದ್ದರೆ ಅದು ತಪ್ಪಾಗುತ್ತದೆ. ಸಾರಿಗೆ ಇಲಾಖೆಯ ದಾಖಲೆಗಳಲ್ಲಿ ವಾಹನದ ಮಾಲಕತ್ವ ವರ್ಗಾವಣೆಗೊಂಡಿದೆ ಎನ್ನುವುದನ್ನು ನೀವು ಖಚಿತ ಪಡಿಸಿಕೊಳ್ಳುವುದು ಅಗತ್ಯವಿದೆ. ವಾಹನ ಮಾರಾಟದ ಬಳಿಕ ಹಣವನ್ನು ಪಡೆದುಕೊಂಡು ಖರೀದಿದಾರನಿಗೆ ಡೆಲಿವರಿ ನೋಟ್ ನೀಡಿಬಿಟ್ಟರೆ ನಿಮ್ಮ ಕೆಲಸ ಮುಗಿಯಿತು ಎಂದು ಅಂದುಕೊಳ್ಳಬೇಡಿ.

 ಏಕೆಂದರೆ ವಾಹನದ ಮಾಲಿಕತ್ವದ ವರ್ಗಾವಣೆಯಾಗಿರದಿದ್ದಾಗ ನಿಮ್ಮಿಂದ ವಾಹನವನ್ನು ಖರೀದಿಸಿದ ವ್ಯಕ್ತಿ ಅಪಘಾತವೆಸಗಿದರೆ ಅಥವಾ ಥರ್ಡ್ ಪಾರ್ಟಿ ಬಾಧ್ಯತೆಯನ್ನುಂಟು ಮಾಡಿದರೆ ನೀವೇ ನಷ್ಟವನ್ನು ಭರಿಸಬೇಕಾಗುತ್ತದೆ ಅಥವಾಪರಿಹಾರವನ್ನು ಪಾವತಿಸಬೇಕಾಗುತ್ತದೆ. ಮೋಟರ್ ವಾಹನಗಳ ಕಾಯ್ದೆಯಂತೆ ನಿಮ್ಮಿಂದ ವಾಹನವನ್ನು ಖರೀದಿಸಿದ ವ್ಯಕ್ತಿಯ ಹೆಸರು ಆರ್‌ಸಿ ಬುಕ್‌ನಲ್ಲಿ ನೋಂದಣಿಯಾಗುವವರೆಗೂ ಆ ವಾಹನ ನಿಮ್ಮ ಬಳಿಯಿಲ್ಲದಿದ್ದರೂ ನೀವೇ ಅದರ ಮಾಲಿಕರಾಗಿರುತ್ತೀರಿ. ಮಾಲಕತ್ವ ವರ್ಗಾವಣೆಗೊಂಡಿರದಿದ್ದರೆ ಮಾರಾಟದ ನಂತರ ಯಾವುದೇ ಬಾಧ್ಯತೆಯು ನಿಮ್ಮ ಹೆಗಲನ್ನೇ ಏರುತ್ತದೆ.

ಇತ್ತೀಚಿಗೆ ವಾಹನ ಅಪಘಾತ ಪ್ರಕರಣವೊಂದರಲ್ಲಿ ತೀರ್ಪು ನೀಡಿರುವ ಬಾಂಬೆ ಉಚ್ಚ ನ್ಯಾಯಾಲಯವು, ಅಪಘಾತವನ್ನು ಖರೀದಿದಾರ ಮಾಡಿದ್ದರೂ ಅಪಘಾತದ ಗಾಯಾಳುವಿಗೆ ಪರಿಹಾರವನ್ನು ಮಾರಾಟಗಾರನೇ ನೀಡಬೇಕೆಂದು ಆದೇಶಿಸಿದೆ. ವಾಹನದ ಮಾಲಕತ್ವ ಇನ್ನೂ ಮಾರಾಟಗಾರನ ಹೆಸರಿನಲ್ಲಿಯೇ ಇತ್ತು ಎನ್ನುವುದು ಈ ಆದೇಶಕ್ಕೆ ಕಾರಣ. ಮೋಟರ್ ವಾಹನಗಳ ಕಾಯ್ದೆಯ ಕಲಂ 50ರಡಿ ವಾಹನದ ಮಾರಾಟದ ಬಳಿಕ ಅದರ ಮಾಲಕತ್ವವು ನಿಗದಿತ ಕಾಲಾವಧಿಯಲ್ಲಿ ಖರೀದಿದಾರನಿಗೆ ವರ್ಗಾವಣೆಗೊಳ್ಳಬೇಕು.

ಏನಿದು ಪ್ರಕರಣ?

ಅರ್ಜಿದಾರ ತನ್ನ ವಾಹನವನ್ನು ಬೇರೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದ ಮತ್ತು ಖರೀದಿದಾರ ಆರ್‌ಟಿಒದಲ್ಲಿ ವಾಹನವನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಸಾಧ್ಯವಾಗುವಂತೆ ಡಿಲಿವರಿ ನೋಟ್ ಮತ್ತು ಇತರ ದಾಖಲೆಗಳನ್ನು ವಾಹನದೊಂದಿಗೆ ಆತನಿಗೆ ಹಸ್ತಾಂತರಿಸಿದ್ದ.

ಮಾರಾಟ ಮಾಡಿದ ಕೆಲವೇ ದಿನಗಳಲ್ಲಿ ಖರೀದಿದಾರ ವಾಹನವನ್ನು ಚಲಾಯಿಸುತ್ತಿದ್ದಾಗ ಪಾದಚಾರಿಯೋರ್ವನಿಗೆ ಢಿಕ್ಕಿ ಹೊಡೆದಿದ್ದ. ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದ. ಗಾಯಾಳು ಬಳಿಕ ಪರಿಹಾರವನ್ನು ಕೋರಿ ಮೋಟರ್ ಅಪಘಾತ ಹಕ್ಕುಕೋರಿಕೆಗಳ ನ್ಯಾಯಾಧಿಕರಣದಲ್ಲಿ ಪರಿಹಾರವನ್ನು ಕೋರಿ ಪ್ರಕರಣವನ್ನು ದಾಖಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಾಧಿಕರಣವು ವಾಹನವು ಇನ್ನೂ ಮಾರಾಟಗಾರನ ಹೆಸರಿನಲ್ಲಿಯೇ ಇರುವುದರಿಂದ ಗಾಯಾಳುವಿಗೆ ವಾರ್ಷಿಕ ಶೇ.7.4 ಬಡ್ಡಿಯೊಂದಿಗೆ 1,34,000 ರೂ.ಪರಿಹಾರವನ್ನು ಪಾವತಿಸುವಂತೆ ಆತನಿಗೆ ಆದೇಶಿಸಿತ್ತು. ಮಾರಾಟಗಾರ ಇದನ್ನು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದನಾದರೂ ಆತನ ಮೇಲ್ಮನವಿಯನ್ನು ನ್ಯಾಯಾಲಯವು ವಜಾಗೊಳಿಸಿದೆ ಮತ್ತು ನ್ಯಾಯಾಧಿಕರಣದ ತೀರ್ಪನ್ನು ಎತ್ತಿಹಿಡಿದಿದೆ.

ಉಚ್ಚ ನ್ಯಾಯಾಲಯದ ತೀರ್ಪು

ಅಪಘಾತ ಸಂಭವಿಸಿದ ದಿನ ಮಾರಾಟಗಾರ ಆರ್‌ಟಿಒ ದಾಖಲೆಗಳಲ್ಲಿ ವಾಹನದ ಮಾಲಿಕನಾಗಿಯೇ ಮುಂದುವರಿದಿದ್ದ ಎನ್ನುವುದನ್ನು ಎತ್ತಿಹಿಡಿದಿರುವ ನ್ಯಾಯಾಲಯವು, ಗಾಯಾಳುವಿಗೆ ಆತನೇ ಪರಿಹಾರವನ್ನು ಪಾವತಿಸಬೇಕು ಎಂದು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News