ನ್ಯಾಯಮೂರ್ತಿ ಲೋಯಾ ನಿಗೂಢ ಸಾವಿನ ಮರು ತನಿಖೆ ನಡೆಯಲಿ: ಶರದ್ ಪವಾರ್

Update: 2019-12-03 17:12 GMT

ಹೊಸದಿಲ್ಲಿ, ಡಿ. 3: ಆಗ್ರಹ ವ್ಯಕ್ತವಾದರೆ ನ್ಯಾಯಮೂರ್ತಿ ಬಿ.ಎಚ್. ಲೋಯಾ ಅವರ ಸಾವಿನ ಪ್ರಕರಣವನ್ನು ಸಿಬಿಐ ಮರು ತನಿಖೆ ನಡೆಸಬೇಕು ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಸೋಮವಾರ ಹೇಳಿದ್ದಾರೆ.

 ಮರಾಠಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಶರದ್ ಪವಾರ್, ‘‘ನ್ಯಾಯಮೂರ್ತಿ ಲೋಯಾ ಅವರ ಸಾವಿನ ಬಗ್ಗೆ ಆಳವಾಗಿ ತನಿಖೆ ನಡೆಸುವಂತೆ ಮಹಾರಾಷ್ಟ್ರದ ಕೆಲವು ಜನರ ನಡುವೆ ಚರ್ಚೆ ನಡೆಯುತ್ತಿದೆ ಎಂದು ನಾನು ಕೆಲವು ಲೇಖನಗಳಲ್ಲಿ ಓದಿದೆ’’ ಎಂದರು.

‘‘ಲೋಯಾ ಅವರ ಸಾವಿನ ಪ್ರಕರಣದ ಬಗ್ಗೆ ಮರು ತನಿಖೆ ನಡೆಸುವಂತೆ ಆಗ್ರಹ ವ್ಯಕ್ತವಾದರೆ, ಆ ಬಗ್ಗೆ ಚಿಂತಿಸಬೇಕು. ಅವರು ಯಾವ ಆಧಾರದಲ್ಲಿ ತನಿಖೆಗೆ ಆಗ್ರಹಿಸುತ್ತಿದ್ದಾರೆ ಎಂಬುದನ್ನು ಅರಿಯಬೇಕು. ಒಂದು ವೇಳೆ ಸಂತ್ಯಾಂಶ ಇದ್ದರೆ, ಮರು ತನಿಖೆಗೆ ಆದೇಶ ನೀಡಬೇಕು’’ ಎಂದು ಅವರು ಹೇಳಿದರು.

 ಲೋಯಾ ಅವರು ಸಾವನ್ನಪ್ಪುವ ಸಂದರ್ಭ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು.

 2017 ನವೆಂಬರ್‌ನಲ್ಲಿ ‘ದಿ ಕಾರವಾನ್’ ವರದಿಯೊಂದನ್ನು ಪ್ರಕಟಿಸಿದ ಬಳಿಕ ಲೋಯಾ ಸಾವಿನ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದವು. ಈ ವರದಿಯಲ್ಲಿ ಲೋಯಾ ಕುಟುಂಬ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದಾಗಿ ಹಾಗೂ ಅನುಕೂಲಕರ ತೀರ್ಪು ನೀಡುವಂತೆ ಒತ್ತಡ ಹೇರಿರುವುದಾಗಿ ಕುಟುಂಬ ಆರೋಪಿಸಿರುವುದಾಗಿ ವರದಿಯಾಗಿತ್ತು.

ಈ ಕಳವಳವನ್ನು ಗಂಭೀರವಾಗಿ ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಹಲವರು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News