ಅತ್ಯಾಚಾರಗಳು ಹೆಚ್ಚುತ್ತಿದ್ದರೂ ಬಳಕೆಯಾಗದೆ ಧೂಳು ತಿನ್ನುತ್ತಿದೆ ನಿರ್ಭಯಾ ನಿಧಿ

Update: 2019-12-03 17:29 GMT

ಹೊಸದಿಲ್ಲಿ, ಡಿ.3: ತೆಲಂಗಾಣದಲ್ಲಿ 26ರ ಹರೆಯದ ಪಶುವೈದ್ಯೆಯ ಘೋರ ಅತ್ಯಾಚಾರ-ಹತ್ಯೆ ಘಟನೆಯ ವಿರುದ್ಧ ಹೆಚ್ಚುತ್ತಿರುವ ಆಕ್ರೋಶದ ನಡುವೆಯೇ ಐದು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಕೇಂದ್ರ ಗೃಹ ಸಚಿವಾಲಯದಿಂದ ತಮಗೆ ಮಂಜೂರು ಮಾಡಲಾದ ನಿರ್ಭಯಾ ನಿಧಿಯಲ್ಲಿ ಚಿಕ್ಕಾಸನ್ನೂ ಬಳಕೆ ಮಾಡಿಕೊಂಡಿಲ್ಲ ಎಂದು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದೆ.

ನವಂಬರ್ 2019ಕ್ಕೆ ಇದ್ದಂತೆ ಅಂಕಿಸಂಖ್ಯೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸದನದಲ್ಲಿ ಮಂಡಿಸಿದ್ದು,ಗೃಹಸಚಿವಾಲಯವು ನಿರ್ಭಯಾ ನಿಧಿಯಡಿ ಮಹಿಳೆಯರ ಸುರಕ್ಷತೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಂಜೂರು ಮಾಡಿರುವ ಹಣದಲ್ಲಿ ಶೇ.91ಕ್ಕೂ ಹೆಚ್ಚಿನ ಮೊತ್ತ ಬಳಕೆಯೇ ಆಗಿಲ್ಲ. ಸಚಿವಾಲಯವು ಹಂಚಿಕೆ ಮಾಡಿದ್ದ 1,672 ಕೋ.ರೂ.ಗಳ ಪೈಕಿ ಕೇವಲ 147 ಕೋ.ರೂ.ಬಳಕೆಯಾಗಿದೆ.

ಈ ಪೈಕಿ 183 ಕೋ.ರೂ.ಗಳನ್ನು ಮಹಾರಾಷ್ಟ್ರ,ಮಣಿಪುರ,ಮೇಘಾಲಯ,ಸಿಕ್ಕಿಂ,ತ್ರಿಪುರಾ ಹಾಗೂ ದಮನ್ ಮತ್ತು ದಿಯುಗೆ ಮೀಸಲಿಡಲಾಗಿತ್ತು. ಈ ಹಣವು ಮಹಿಳೆಯರ ಸುರಕ್ಷತೆಗಾಗಿ ಕ್ರಮಗಳಿಗೆ ಬಳಕೆಯಾಗಬೇಕಿತ್ತು. ಆದರೆ ಅಷ್ಟೂ ಹಣ ಬಳಕೆಯಾಗದೇ ಹಾಗೆಯೇ ಉಳಿದುಕೊಂಡಿದೆ. ಮಹಾರಾಷ್ಟ್ರವೊಂದಕ್ಕೇ ಸುಮಾರು 103 ಕೋ.ರೂ.ಗಳನ್ನು ನೀಡಲಾಗಿತ್ತು. ಹೈದರಾಬಾದ್ ಬಳಿ ಪಶುವೈದ್ಯೆಯ ಅತ್ಯಾಚಾರ-ಹತ್ಯೆಯ ಬಳಿಕ ಪ್ರತಿಭಟನೆಗಳು ಮತ್ತು ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿರುವ ತೆಲಂಗಾಣ ತನಗೆ ನೀಡಲಾಗಿದ್ದ 103 ಕೋ.ರೂ.ಗಳಲ್ಲಿ ಕೇವಲ 4.19 ಕೋ.ರೂ. (ಶೇ.4) ಬಳಸಿಕೊಂಡಿದ್ದರೆ, ಭಾರತದ ಅತ್ಯಾಚಾರಗಳ ರಾಜಧಾನಿಯಾಗಿರುವ ದಿಲ್ಲಿ ತನಗೆ ಮಂಜೂರಾಗಿದ್ದ 390 ಕೋ.ರೂ.ಗಳ ಕೇವಲ ಶೇ.5ರಷ್ಟನ್ನು ಮಾತ್ರ ಬಳಸಿದೆ.

ನಿಧಿ ಬಳಕೆಯಲ್ಲಿ ಹಿಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮತ್ತು ಕೇರಳಗಳೂ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News