ವಿದೇಶಕ್ಕೆ ಪರಾರಿಯಾಗಿರುವ 51 ಮಂದಿಯಿಂದ 17,900 ಕೋಟಿ ರೂ. ವಂಚನೆ: ಸರಕಾರದ ಮಾಹಿತಿ

Update: 2019-12-03 17:28 GMT

ಹೊಸದಿಲ್ಲಿ, ಡಿ.3: ದೇಶಬಿಟ್ಟು ತಲೆಮರೆಸಿಕೊಂಡಿರುವ 51 ಮಂದಿ ಒಟ್ಟು 17,900 ಕೋಟಿ ರೂ. ವಂಚಿಸಿದ್ದಾರೆ ಎಂದು ಸರಕಾರ ಸಂಸತ್ತಿನಲ್ಲಿ ಮಾಹಿತಿ ನೀಡಿದೆ.

ಪರಾರಿಯಾದ ಆರ್ಥಿಕ ಅಪರಾಧಿಗಳ ಕುರಿತು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿತ್ತಖಾತೆಯ ಸಹಾಯಕ ಸಚಿವ ಅನುರಾಗ್ ಸಿಂಗ್ ಈ ಮಾಹಿತಿ ನೀಡಿದ್ದಾರೆ. 66 ಪ್ರಕರಣಗಳಲ್ಲಿ ಶಾಮೀಲಾಗಿರುವ (ತಲೆಮರೆಸಿಕೊಂಡಿರುವ ಮತ್ತು ಘೋಷಿತ) 51 ಆರೋಪಿಗಳು ದೇಶಬಿಟ್ಟು ಪರಾರಿಯಾಗಿದ್ದು, ಇವರು ಒಟ್ಟು 17,947.11 ಕೋಟಿ ರೂ. ಮೊತ್ತವನ್ನು ವಂಚಿಸಿರುವುದಾಗಿ ಸಿಬಿಐ ಮಾಹಿತಿ ನೀಡಿದೆ ಎಂದು ಸಿಂಗ್ ತಿಳಿಸಿದ್ದಾರೆ.

 ಇಂತಹ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸಕ್ಷಮ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ್ದು, ಈಗ ನ್ಯಾಯಾಲಯದ ಕಾರ್ಯಕಲಾಪ ತನಿಖೆ ಅಥವಾ ವಿಚಾರಣಾ ಹಂತದಲ್ಲಿದೆ ಎಂದು ಸಚಿವರು ಹೇಳಿದ್ದಾರೆ.

ಈ ಪ್ರಕರಣಗಳಲ್ಲಿ ಎಷ್ಟು ರಿಯಾಯಿತಿ ಘೋಷಿಸಲಾಗಿದೆ ಹಾಗೂ ಎಷ್ಟು ಮೊತ್ತದ ಸಾಲ ವಜಾ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣದಲ್ಲಿ ಸಾಲದ ಮೊತ್ತವನ್ನು ಎನ್‌ಪಿಎ(ಅನುತ್ಪಾದಕ ಆಸ್ತಿ) ಎಂದು ವರ್ಗೀಕರಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಎನ್‌ಪಿಎಗಳನ್ನು ಗುರುತಿಸಿ ನಿರೀಕ್ಷಿತ ನಷ್ಟಕ್ಕೆ ಸರಿಹೊಂದಿಸುವ ಪ್ರಕ್ರಿಯೆಗೆ ಚಾಲನೆ ನೀಡಿವೆ ಎಂದು ತಿಳಿಸಿದರು.

   ಅಕ್ರಮವಾಗಿ ದೇಶ ಬಿಟ್ಟು ತಲೆಮರೆಸಿಕೊಂಡಿರುವ 6 ಆರ್ಥಿಕ ಅಪರಾಧಿಗಳ ಬಗ್ಗೆ ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಸ್ ಆ್ಯಂಡ್ ಕಸ್ಟಮ್ಸ್(ಸಿಬಿಐಸಿ) ವರದಿ ಮಾಡಿದೆ. ಜಾರಿ ನಿರ್ದೇಶನಾಲಯ ಸಕ್ಷಮ ನ್ಯಾಯಾಲಯಗಳಲ್ಲಿ 10 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ದೇಶಬಿಟ್ಟು ತಲೆಮರೆಸಿಕೊಂಡಿರುವ ಆರೋಪಿಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸುವಂತೆ ಸಿಬಿಐಸಿ ಕಳೆದ ಜುಲೈಯಲ್ಲಿ ವಿದೇಶ ವ್ಯವಹಾರ ಇಲಾಖೆಗೆ 2 ಕೋರಿಕೆ ಸಲ್ಲಿಸಿದೆ. ಜಾರಿ ನಿರ್ದೇಶನಾಲಯ ಸಲ್ಲಿಸಿರುವ 8 ಕೋರಿಕೆಗೆ ಸಂಬಂಧಿಸಿ ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಿದೆ ಎಂದು ಸಚಿವರು ಉತ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News