ಬಿಡಬ್ಲ್ಯುಎಫ್ ರ‍್ಯಾಂಕಿಂಗ್‌: ಸೌರಭ್ ವರ್ಮಾಗೆ 29ನೇ ಸ್ಥಾನ

Update: 2019-12-03 18:07 GMT

ಹೊಸದಿಲ್ಲಿ, ಡಿ.3: ಬಿಡಬ್ಲ್ಯುಎಫ್ ರ‍್ಯಾಂಕಿಂಗ್‌ ಮಂಗಳವಾರ ಪ್ರಕಟಗೊಂಡಿದ್ದು, ಸಯ್ಯದ್ ಮೋದಿ ಇಂಟರ್‌ನ್ಯಾಶನಲ್‌ನಲ್ಲಿ ಎರಡನೇ ಸ್ಥಾನ ಪಡೆದಿರುವ ಭಾರತದ ಸೌರಭ್ ವರ್ಮಾ 29ನೇ ಸ್ಥಾನ ಪಡೆದಿದ್ದಾರೆ. ಭಾರತದ 6 ಶಟ್ಲರ್‌ಗಳು ಅಗ್ರ 30ರೊಳಗೆ ಸ್ಥಾನ ಪಡೆದಿದ್ದಾರೆ.

2012ರಲ್ಲಿ ವಿಶ್ವದ ನಂ. 30 ಸ್ಥಾನ ತಲುಪಿದ್ದ ಮಧ್ಯಪ್ರದೇಶದ 26 ರ ಹರೆಯದ ಸೌರಭ್ ವರ್ಮಾ ಅವರು ಹೈದರಾಬಾದ್ ಮತ್ತು ವಿಯೆಟ್ನಾಂನಲ್ಲಿ ಎರಡು ಬಿಡಬ್ಲುಎಫ್ ಸೂಪರ್ 100 ಪ್ರಶಸ್ತಿಗಳನ್ನು ಪಡೆದರು ಮತ್ತು ಮೇ ತಿಂಗಳಲ್ಲಿ ಸ್ಲೊವೇನಿಯಾ ಅಂತರ್‌ರಾಷ್ಟ್ರೀಯ ಸರಣಿಯನ್ನು ಜಯಿಸಿದ್ದರು.

ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಸೌರಭ್ ರವಿವಾರ ಚೀನಾದ ತೈಪೆಯ ವಾಂಗ್ ತ್ಸು ವೀ ವಿರುದ್ಧ ಸೋಲುವ ಮೊದಲು ಲಕ್ನೊದಲ್ಲಿ ನಡೆದ ಸೂಪರ್ 300 ಟೂರ್ನಿಯಲ್ಲಿ ಚೊಚ್ಚಲ ಫೈನಲ್ ಪ್ರವೇಶಿಸಿದ್ದರು. ಇದರ ನೆರವಿನಲ್ಲಿ ಸೌರಭ್ ವರ್ಮಾ ಏಳು ಸ್ಥಾನಗಳ ಭಡ್ತಿ ಪಡೆದು 29 ನೇ ಸ್ಥಾನವನ್ನು ಪಡೆದರು.

ಅಗ್ರ 30ರೊಳಗೆ ಆರು ಶಟ್ಲರ್‌ಗಳನ್ನು ಹೊಂದಿರುವ ಏಕೈಕ ದೇಶ ಭಾರತವಾಗಿದೆ. ಚೀನಾ ಐದು ಆಟಗಾರರನ್ನು ಅಗ್ರ 30ರೊಳಗೆ ಹೊಂದಿದೆ. ಕಳೆದ ವರ್ಷ ಟಾಟಾ ಓಪನ್ ಇಂಡಿಯಾ ಇಂಟರ್‌ನ್ಯಾಶನಲ್ ಚಾಲೆಂಜ್ ಮತ್ತು ದುಬೈ ಇಂಟರ್‌ನ್ಯಾಶನಲ್ ಚಾಲೆಂಜ್ ಗೆದ್ದ ಯುವತಿ ಶಟ್ಲರ್ ಅಶ್ಮಿತಾ ಚಲಿಹಾ ಸಹ 18 ಸ್ಥಾನಗಳ ಭಡ್ತಿ ಪಡೆದು ಅಗ್ರ 100ರಲ್ಲಿ ಸ್ಥಾನ ಪಡೆದಿದ್ದಾರೆ.

ಗುವಾಹಟಿಯ 20ರ ಹರೆಯದ ಅಶ್ಮಿತಾ ಕಳೆದ ವಾರ ಲಕ್ನೊದಲ್ಲಿ ನಡೆದ ಕೂಟದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಹಿಂದೆ ಜುಲೈನಲ್ಲಿ ವೈಟ್ ನೈಟ್ಸ್ ಇಂಟರ್‌ನ್ಯಾಶನಲ್ ಚಾಲೆಂಜ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಸಯ್ಯದ್ ಮೋದಿ ಇಂಟರ್‌ನ್ಯಾಶನಲ್‌ನಿಂದ ಹೊರಗುಳಿದ ಅಗ್ರ ಆಟಗಾರ್ತಿಯರಾದ ಪಿ ವಿ ಸಿಂಧು (ವಿಶ್ವ ನಂ. 6) ಮತ್ತು ಸೈನಾ ನೆಹ್ವಾಲ್ (ವಿಶ್ವ ನಂ .10) ಅವರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಕಿಡಂಬಿ ಶ್ರೀಕಾಂತ್ ಮತ್ತು ಬಿ ಸಾಯಿ ಪ್ರಣೀತ್ ಕೂಡ ಕ್ರಮವಾಗಿ ವಿಶ್ವದ 12 ಮತ್ತು 11 ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News