ಜ್ಞಾನದ ತಳಹದಿಯಲ್ಲಿ ದೇಶವನ್ನು ಮುನ್ನಡೆಸಬೇಕಾಗಿದೆ: ಡಾ.ಕಸ್ತೂರಿ ರಂಗನ್

Update: 2019-12-04 07:12 GMT

ಮಂಗಳೂರು, ಡಿ.4: ಜ್ಞಾನದ ತಳಹದಿಯಲ್ಲಿ ದೇಶವನ್ನು ಮುನ್ನಡೆಸಬೇಕಾಗಿದೆ. ದೇಶದ ಶಿಕ್ಷಣ ನೀತಿ ರೂಪಿಸುವ ಬಗ್ಗೆ 200ಕ್ಕೂ ಹೆಚ್ಚು ಜನರು ನೀಡಿದ ಸಲಹೆಗಳನ್ನು ಸಂಗ್ರಹಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ, ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ರಚನಾ ಸಮಿತಿಯ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ತಿಳಿಸಿದ್ದಾರೆ.

ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಬಾಹ್ಯಾಕಾಶ ಮತ್ತು ಅದರಾಚೆಗೆ ಲಗ್ಗೆ’ ಎಂಬ ವಿಷಯದ ಬಗ್ಗೆ ಕಾಲೇಜಿನ ರಸ್ಕಿನ್ಹಾ ಸಭಾಂಗಣದಲ್ಲಿ ಬುಧವಾರ ದತ್ತಿ ಉಪನ್ಯಾಸ ನೀಡುತ್ತಿದ್ದರು.

ಆಧುನಿಕ ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಹಿಂದಿಗಿಂತ ಹೆಚ್ಚು ಸವಾಲುಗಳಿವೆ. ಹೆಚ್ಚು ನಿರೀಕ್ಷೆಗಳು ಇಂತಹ ಸಂದರ್ಭಗಳಲ್ಲಿ ನಮ್ಮಿಂದ ಈ ಕೆಲಸ ಸಾಧ್ಯವಿದೆಯೇ ಇಲ್ಲವೋ ಎನ್ನುವ ಸಂದೇಹ, ಹಿಂಜರಿಕೆ ಬೇಡ, ಜ್ಞಾನದ ತಳಹದಿಯ ಮೇಲೆ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ನಮ್ಮ ಯುವ ಜನಾಂಗದ ಮೇಲಿದೆ. ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಸವಾಲುಗಳನ್ನು ಎದುರಿಸಲು ಹಿಂಜರಿಯಬೇಡಿ ಎಂದು ಡಾ.ಕಸ್ತೂರಿ ರಂಗನ್ ತಿಳಿಸಿದ್ದಾರೆ.

*ಮುಂದಿನ ಎರಡು ವರ್ಷಗಳಲ್ಲಿ ಮಾನವಸಹಿತ ಗಗನಯಾನ:
ಮುಂದಿನ ಎರಡು ವರ್ಷಗಳಲ್ಲಿ ಮಾನವಸಹಿತ ಗಗನಯಾತ್ರೆಯನ್ನು ಕೈಗೊಳ್ಳಲು ಸಿದ್ಧತೆ ನಡೆದಿದೆ. 2022ರಲ್ಲಿ ಗಗನ ಯಾತ್ರೆಯ ಬಾಹ್ಯಾಕಾಶ ನೌಕೆ ಸಿದ್ಧಗೊಳ್ಳಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷರಾಗಿರುವ ಡಾ.ಕೆ.ಕಸ್ತೂರಿ ರಂಗನ್ ತಿಳಿಸಿದರು.

ಮುಂದಿನ ವರ್ಷಗಳಲ್ಲಿ ಜಗತ್ತಿನ ವಿವಿಧ ಮೂಲೆಗಳ ಮಾಹಿತಿಗಳ ನ್ನು ಸಚಿತ್ರವಾಗಿ ಸಂಗ್ರಹಿಸುವ ಉಪಗ್ರಹಗಳನ್ನು, ಬಾಹ್ಯಾಕಾಶ ಸಾಧನಗಳನ್ನು ಇಸ್ರೋ ಅಭಿವೃದ್ಧಿಪಡಿಸಲಿದೆ. ಬಾಹ್ಯಕಾಶದ ಸಂಶೋಧನೆ ದೇಶದ ವಿಜ್ಞಾನ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಗೆ ಬಳಕೆ ಮಾಡಲು ಭಾರತ 1963ರಿಂದ ಆರಂಭಿಸಿ ಸಾಕಷ್ಟು ಸಾಧನೆ ಮಾಡಿದೆ. ಪ್ರಾಕ್ರತಿಕ ವಿಕೋಪಗಳ ಮಾಹಿತಿಯನ್ನು ಮುಂಚಿತವಾಗಿ ಪಡೆಯಲು ಸಾಧ್ಯವಾಗಿದೆ ಎಂದು ಅವರು ವಿವರಿಸಿದರು.

ಸಮಾರಂಭದಲ್ಲಿ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ.ಡಯೊನಿಶಿಯಸ್ ವಾಸ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಸಂಯೋಜಕ ಡಾ.ರೊನಾಲ್ಡ್ ನಝ್ರತ್, ಸಂಚಾಲಕ ಡಾ.ವಿನೋಲಾ ರೊಡ್ರಿಗಸ್, ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News