ಸುಡಾನ್: ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡು 18 ಭಾರತೀಯ ಕಾರ್ಮಿಕರು ಮೃತ್ಯು

Update: 2019-12-04 17:25 GMT
Photo: Ebrahim Hamid/AFP

ಖಾರ್ತೂಮ್, ಡಿ.4: ಸುಡಾನ್‌ನ ಉತ್ತರ ಖಾರ್ತೂಮ್‌ನಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಸ್ಫೋಟಗೊಂಡು ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಭಾರತೀಯರ ಸಹಿತ ಕನಿಷ್ಟ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಸೆರಾಮಿಕ್ ಟೈಲ್ಸ್ ಉತ್ಪಾದಿಸುವ ಫ್ಯಾಕ್ಟರಿಯಲ್ಲಿ ಅಗ್ನಿದುರಂತ ಸಂಭವಿಸಿದ್ದು ಫ್ಯಾಕ್ಟರಿಯಲ್ಲಿ 50ಕ್ಕೂ ಹೆಚ್ಚು ಭಾರತೀಯ ಉದ್ಯೋಗಿಗಳಿದ್ದರು . ಮೃತಪಟ್ಟ ಅಥವಾ ಗಾಯಗೊಂಡ ಭಾರತೀಯರ ಬಗ್ಗೆ ಹೆಚ್ಚಿನ ವಿವರ ತಿಳಿದುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಭಾರೀ ಸ್ಫೋಟ ಉಂಟಾಗಿದ್ದು ಫ್ಯಾಕ್ಟರಿಯ ಕಂಪೌಂಡ್‌ನಲ್ಲಿ ಪಾರ್ಕ್ ಮಾಡಿದ್ದ ಹಲವು ಕಾರುಗಳಿಗೂ ಬೆಂಕಿ ಹಬ್ಬಿದೆ. ಸ್ಫೋಟ ಮತ್ತು ಬೆಂಕಿಯಿಂದ ಫ್ಯಾಕ್ಟರಿಯ ಸುತ್ತಮುತ್ತ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿದೆ. ಎಲ್‌ಪಿಜಿ ಟ್ಯಾಂಕರ್‌ನಲ್ಲಿ ಉಂಟಾದ ಸ್ಫೋಟದಿಂದ ಬೆಂಕಿ ಹಬ್ಬಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫ್ಯಾಕ್ಟರಿಯಲ್ಲಿ 50ಕ್ಕೂ ಹೆಚ್ಚು ಭಾರತೀಯ ಉದ್ಯೋಗಿಗಳಿದ್ದು ಮೃತಪಟ್ಟವರಲ್ಲಿ ಭಾರತೀಯರೂ ಸೇರಿದ್ದಾರೆ ಎಂದು ಖಾರ್ತೂಮ್‌ನ ಭಾರತೀಯ ದೂತಾವಾಸ ತಿಳಿಸಿದೆ. ಕೈಗಾರಿಕಾ ವಲಯದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 23 ಮಂದಿ ಸಾವನ್ನಪ್ಪಿದ್ದು 130ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹಲವು ಆಸ್ಪತ್ರೆಗೆ ದಾಖಲಿಸಲಾಗಿದ್ದು , ಸ್ಫೋಟ ನಡೆದ ಫ್ಯಾಕ್ಟರಿಯಲ್ಲಿ ಅಗತ್ಯದ ಸುರಕ್ಷಾ ಉಪಕರಣಗಳು ಇರಲಿಲ್ಲ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಅಲ್ಲದೆ ಸುಲಭವಾಗಿ ಬೆಂಕಿಹತ್ತಿಕೊಳ್ಳುವ ವಸ್ತುಗಳನ್ನು ಅಸಮರ್ಪಕವಾಗಿ ದಾಸ್ತಾನು ಮಾಡಲಾಗಿದ್ದು ಇದು ಬೆಂಕಿ ಅನಾಹುತಕ್ಕೆ ಕಾರಣವಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸುಡಾನ್ ಸರಕಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸುಡಾನ್‌ನಲ್ಲಿ ವೈದ್ಯರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮುಷ್ಕರ ನಡೆಸುತ್ತಿರುವ ವೈದ್ಯರು ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ವೈದ್ಯರ ಸಂಘ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News