ಉಯಿಘರ್ ಮುಸ್ಲಿಮರ ದಮನ ಖಂಡಿಸಿ ಅಮೆರಿಕ ಹೌಸ್‌ನಿಂದ ಮಸೂದೆ ಅಂಗೀಕಾರ

Update: 2019-12-04 14:00 GMT

ವಾಶಿಂಗ್ಟನ್, ಡಿ. 4: ಅಲ್ಪಸಂಖ್ಯಾತ ಉಯಿಘರ್ ಮುಸ್ಲಿಮರನ್ನು ಚೀನಾ ನಡೆಸಿಕೊಳ್ಳುತ್ತಿರುವ ವಿಚಾರದಲ್ಲಿ, ಆ ದೇಶದೊಂದಿಗೆ ಕಠಿಣವಾಗಿ ವ್ಯವಹರಿಸಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಗೆ ಕರೆ ನೀಡುವ ಮಸೂದೆಯೊಂದನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಂಗಳವಾರ ಅಗಾಧ ಬಹುಮತದಿಂದ ಅನುಮೋದಿಸಿದೆ.

ಈ ವಿಷಯದಲ್ಲಿ ಚೀನಾದ ಹಿರಿಯ ಅಧಿಕಾರಿಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸುವಂತೆ ಮಸೂದೆಯು ಅಮೆರಿಕ ಅಧ್ಯಕ್ಷರನ್ನು ಒತ್ತಾಯಿಸುತ್ತದೆ.

‘ಉಯಿಘರ್ ಆ್ಯಕ್ಟ್ ಆಫ್ 2019’ ಮಸೂದೆಯು, ಪಶ್ಚಿಮದ ಕ್ಸಿನ್‌ಜಿಯಾಂಗ್ ವಲಯದಲ್ಲಿ ಚೀನಾ ನಡೆಸಿದ ದಮನ ಕಾರ್ಯಾಚರಣೆಯ ವೇಳೆ ನಡೆದಿದೆಯೆನ್ನಲಾದ ‘ಸಾರಾಸಗಟು ಮಾನವಹಕ್ಕು ಉಲ್ಲಂಘನೆಗಳನ್ನು’ ಖಂಡಿಸುತ್ತದೆ. ಈ ವಲಯದಲ್ಲಿ ಸುಮಾರು 10 ಲಕ್ಷ ಉಯಿಘರ್ ಮುಸ್ಲಿಮರು ಹಾಗೂ ಇತರ ಮುಸ್ಲಿಮ್ ಪಂಗಡಗಳ ಜನರನ್ನು ‘ಮರು-ಶಿಕ್ಷಣ ಶಿಬಿರ’ಗಳೆನ್ನಲಾದ ಶಿಬಿರಗಳಲ್ಲಿ ಕೂಡಿ ಹಾಕಲಾಗಿದೆ.

407-1 ಮತಗಳ ಅಗಾಧ ಅಂತರದಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅಂಗೀಕಾರಗೊಂಡ ಮಸೂದೆಯು, ಸೆಪ್ಟಂಬರ್‌ನಲ್ಲಿ ಸೆನೆಟ್‌ನಲ್ಲಿ ಅಂಗೀಕಾರಗೊಂಡ ಮಸೂದೆಯ ಸುಧಾರಿತ ಹಾಗೂ ಬಲಿಷ್ಠ ರೂಪವಾಗಿದೆ. ಈ ಮಸೂದೆಯ ಎರಡು ರೂಪಗಳನ್ನು ಸಮೀಕರಿಸಿ ಒಂದಾಗಿ ಮಾಡಿ ಅಧ್ಯಕ್ಷರ ಅಂಕಿತಕ್ಕಾಗಿ ಕಳುಹಿಸಲಾಗುವುದು.

ಅಮೆರಿಕ ಸಂಸತ್ತು ಈಗಾಗಲೇ ಹಾಂಕಾಂಗ್ ಪ್ರಜಾಪ್ರಭುತ್ವ ಪರ ಹೋರಾಟವನ್ನು ಬೆಂಬಲಿಸಿ ಮಸೂದೆಯನ್ನು ಅಂಗೀಕರಿಸಿದೆ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದಕ್ಕೆ ಕಳೆದ ವಾರ ಸಹಿ ಹಾಕಿದ್ದು ಈಗ ಕಾನೂನಾಗಿದೆ. ಹಾಂಕಾಂಗ್ ಮಸೂದೆಗೆ ಚೀನಾ ಈಗಾಗಲೇ ಪ್ರಬಲ ಪ್ರತಿಭಟನೆ ಸಲ್ಲಿಸಿದೆ ಹಾಗೂ ಪ್ರತೀಕಾರದ ಕ್ರಮಗಳನ್ನೂ ಘೋಷಿಸಿದೆ.

ಸಾಮೂಹಿಕ, ಸ್ವೇಚ್ಛಾಚಾರದ ಬಂಧನಕ್ಕೆ ಖಂಡನೆ

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದ ಮಸೂದೆಯು ಉಯಿಘರ್ ಮುಸ್ಲಿಮರ ಸಾಮೂಹಿಕ ಹಾಗೂ ಸ್ವೇಚ್ಛಾಚಾರದ ಬಂಧನವನ್ನು ಖಂಡಿಸುತ್ತದೆ ಹಾಗೂ ಅವರನ್ನು ಕೂಡಿಹಾಕಲಾದ ತಥಾಕಥಿತ ‘ಮರುಶಿಕ್ಷಣ ಶಿಬಿರ’ಗಳನ್ನು ಮುಚ್ಚುವಂತೆ ಆಗ್ರಹಿಸುತ್ತದೆ.

ಅದೇ ವೇಳೆ, ಚೀನಾದ ಉಯಿಘರ್ ನೀತಿಯ ಹಿಂದೆ ಇರುವ ಅಧಿಕಾರಿಗಳು, ಅದರಲ್ಲೂ ಮುಖ್ಯವಾಗಿ ಕ್ಸಿನ್‌ಜಿಯಾಂಗ್ ವಲಯದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಚೆನ್ ಕ್ವಾಂಗುವೊ ವಿರುದ್ಧ ದಿಗ್ಬಂಧನಗಳನ್ನು ವಿಧಿಸುವಂತೆ ಮಸೂದೆಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸುತ್ತದೆ.

ಅಮೆರಿಕ ಬೆಲೆ ತೆರಲೇಬೇಕು: ಚೀನಾ

ಉಯಿಘರ್ ಮುಸ್ಲಿಮರ ವಿರುದ್ಧ ಚೀನಾ ನಡೆಸುತ್ತಿದೆಯೆನ್ನಲಾದ ದಮನ ಕಾರ್ಯಾಚರಣೆಗೆ ಪ್ರತಿಯಾಗಿ ಚೀನಾದ ಉನ್ನತ ಅಧಿಕಾರಿಗಳ ವಿರುದ್ಧ ದಿಗ್ಬಂಧನ ವಿಧಿಸುವಂತೆ ಕರೆ ನೀಡುವ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಮಸೂದೆಗೆ ಬುಧವಾರ ಕೋಪದಿಂದ ಪ್ರತಿಕ್ರಿಯಿಸಿರುವ ಚೀನಾ, ಇದಕ್ಕೆ ಅಮೆರಿಕ ಬೆಲೆ ತೆರಲೇಬೇಕು ಎಂದಿದೆ.

‘‘ಎಲ್ಲ ತಪ್ಪು ಕೃತ್ಯಗಳು ಮತ್ತು ಮಾತುಗಳಿಗೆ ಸರಿಯಾದ ಬೆಲೆ ತೆರಲೇಬೇಕು’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News