ಬಳಕೆದಾರರ ಮಾಹಿತಿಗಳನ್ನು ಚೀನಾಕ್ಕೆ ಕಳುಹಿಸುತ್ತಿರುವ ‘ಟಿಕ್‌ಟಾಕ್’: ಆರೋಪ

Update: 2019-12-04 14:34 GMT

ಕ್ಯಾಲಿಫೋರ್ನಿಯ (ಅಮೆರಿಕ), ಡಿ. 4: ಚೀನಾದ ಕಿರು ವೀಡಿಯೊ ತಯಾರಕ ಆ್ಯಪ್ ಕಂಪೆನಿಯು ಟಿಕ್‌ಟಾಕ್ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿ ಚೀನಾದಲ್ಲಿ ಸರ್ವರ್‌ಗಳಿಗೆ ಕಳುಹಿಸುತ್ತದೆ ಎಂದು ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಪ್ಯಾಲೊ ಆಲ್ಟೊ ನಗರದ ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.

ಟಿಕ್‌ಟಾಕ್ ಕಂಪೆನಿ ಮತ್ತು ಅದರ ಚೀನಾದಲ್ಲಿರುವ ಮಾತೃ ಸಂಸ್ಥೆ ಬೈಟ್‌ಡ್ಯಾನ್ಸ್, ಬಳಕೆದಾರರ ಮಾಹಿತಿಗಳನ್ನು ಜೋಪಾನವಾಗಿ ನಿಭಾಯಿಸುವ ತನ್ನ ಕರ್ತವ್ಯವನ್ನು ನಿರ್ಲಕ್ಷಿಸಿದೆ ಹಾಗೂ ದತ್ತಾಂಶ ಸಂಗ್ರಹ ಮತ್ತು ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ಹಲವು ಕಾಯ್ದೆಗಳನ್ನು ‘ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ’ ಎಂದು ಕಾಲೇಜು ವಿದ್ಯಾರ್ಥಿ ಮಿಸ್ಟಿ ಹೊಂಗ್ ತನ್ನ ಮೊಕದ್ದಮೆಯಲ್ಲಿ ಆರೋಪಿಸಿದ್ದಾರೆ.

ಡ್ರಾಫ್ಟ್ ವೀಡಿಯೋಸ್ ಮುಂತಾದ ಬಳಕೆದಾರ ವಸ್ತುವನ್ನು ಬಳಕೆದಾರರ ಅನುಮತಿ ಇಲ್ಲದೆ ಬೈಟ್‌ಡ್ಯಾನ್ಸ್ ಪಡೆದುಕೊಳ್ಳುತ್ತಿದೆ ಹಾಗೂ ಅದು ಅಸ್ಪಷ್ಟ ಖಾಸಗಿತನದ ನೀತಿಗಳನ್ನು ಹೊಂದಿದೆ ಎಂದು ವಿದ್ಯಾರ್ಥಿ ಹೇಳಿದ್ದಾರೆ.

ಟಿಕ್‌ಟಾಕ್ ಸಂಗ್ರಹಿಸಿದ ದತ್ತಾಂಶಗಳ ಮೂಲಕ ಅಮೆರಿಕದಲ್ಲಿರುವ ಬಳಕೆದಾರರನ್ನು ಗುರುತಿಸಬಹುದು, ಅವರನ್ನು ವಿಂಗಡಿಸಬಹುದು ಹಾಗೂ ಅವರ ಚಲನವಲನಗಳ ಮೇಲೆ ನಿಗಾ ಇಡಬಹುದು ಎಂದು ವಿದ್ಯಾರ್ಥಿ ತನ್ನ ಮೊಕದ್ದಮೆಯಲ್ಲಿ ಆರೋಪಿಸಿದ್ದಾರೆ ಎಂದು ಸಿಎನ್‌ಇಟಿ ಸೋಮವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News