ಭಾರತ ‘ಹಿಂದೂ ರಾಷ್ಟ್ರ’ ಎಂದ ಬಿಜೆಪಿ ಸಂಸದ, ನಟ ರವಿ ಕಿಶನ್

Update: 2019-12-04 15:46 GMT

ಹೊಸದಿಲ್ಲಿ,ಡಿ.4: ದೇಶದಲ್ಲಿ ಸುಮಾರು 100 ಕೋಟಿ ಹಿಂದೂಗಳಿರುವುದರಿಂದ ಭಾರತವು ಹಿಂದೂ ರಾಷ್ಟ್ರವಾಗಿದೆ ಎಂದು ಖ್ಯಾತ ಭೋಜಪುರಿ ನಟ ಹಾಗೂ ಬಿಜೆಪಿ ಸಂಸದ (ಗೋರಖಪುರ) ರವಿಕಿಶನ್‌ ಹೇಳಿದ್ದು,ಇದು ಇನ್ನೊಂದು ವಿವಾದವನ್ನು ಸೃಷ್ಟಿಸುವ ಸಾಧ್ಯತೆಯಿದೆ.

ಹಿಂದೂಗಳ ಜನಸಂಖ್ಯೆ ಒಂದು ನೂರು ಕೋಟಿಯಿದೆ,ಹೀಗಾಗಿ ಸಹಜವಾಗಿಯೇ ಭಾರತವು ಹಿಂದೂ ರಾಷ್ಟ್ರವಾಗಿದೆ. ವಿಶ್ವದಲ್ಲಿ ಹಲವಾರು ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಾಷ್ಟ್ರಗಳಿವೆ. ನಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಲು ‘ಭಾರತ’ಎಂಬ ರಾಷ್ಟ್ರವನ್ನು ನಾವು ಹೊಂದಿರುವುದು ಅದ್ಭುತ ’ಎಂದು ಕೇಂದ್ರ ಸಂಪುಟವು ಬುಧವಾರ ಸಂಸತ್ತಿನಲ್ಲಿ ಮಂಡಿಸಲು ಹಸಿರು ನಿಶಾನೆಯನ್ನು ತೋರಿಸಿರುವ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯ ಕುರಿತು ಮಾತನಾಡುತ್ತಿದ್ದ ರವಿಕಿಶನ್ ಹೇಳಿದರು.

ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಾಷ್ಟ್ರಗಳಿರುವಾಗ ನಾವೇಕೆ ಹಿಂದು ರಾಷ್ಟ್ರವಾಗಬಾರದು ಎಂದು ಅವರು ಪ್ರಶ್ನಿಸಿದರು. ಪೌರತ್ವ ಮಸೂದೆಯ ಬಗ್ಗೆ ಪ್ರತಿಪಕ್ಷಗಳಿಗೆ ಹುಚ್ಚು ಹಿಡಿದಿದೆ ಎಂದು ಅವರು ಟೀಕಿಸಿದರು.

ಮಸೂದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳ ಮುಸ್ಲಿಮೇತರ ನಿರಾಶ್ರಿತರು ಭಾರತೀಯ ಪೌರತ್ವ ಪಡೆಯುವುದನ್ನು ಸುಲಭವಾಗಿಸುತ್ತದೆ. ಉದ್ದೇಶಿತ ಕಾನೂನನ್ನು ಟೀಕಿಸಿರುವ ಹಲವಾರು ಪ್ರತಿಪಕ್ಷಗಳು ಅದು ಮುಸ್ಲಿಮರನ್ನು ಹೊರತುಪಡಿಸಿರುವುದರಿಂದ ಜಾತ್ಯತೀತ ತತ್ವಗಳು ಮತ್ತು ಸಂವಿಧಾನದಲ್ಲಿ ನೀಡಲಾಗಿರುವ ಸಮಾನತೆಯ ಹಕ್ಕನ್ನು ಉಲ್ಲಂಘಿಸಿದೆ ಎಂದು ಆರೋಪಿಸಿವೆ.

ಪೌರತ್ವ ಮಸೂದೆಗೆ ಸಿಪಿಎಂ ವಿರೋಧ

ಪೌರತ್ವ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಪೌರತ್ವವನ್ನು ಧರ್ಮದಿಂದ ನಿರ್ಧರಿಸಲಾಗದು. ಪೌರತ್ವಕ್ಕೂ ಧರ್ಮಕ್ಕೂ ತಳುಕು ಹಾಕುವಂತಿಲ್ಲ,ಹೀಗಾಗಿ ಪೌರತ್ವ ಮಸೂದೆಯು ಸ್ವೀಕಾರಾರ್ಹವಲ್ಲ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.

‘ಭಾರತದ ಪ್ರಜೆಗಳು ಅದರ ಪ್ರಜೆಗಳಾಗಿದ್ದಾರೆ. ಅವರ ಧರ್ಮ, ಆಹಾರ ಕ್ರಮ, ಉದ್ಯೋಗ, ಜಾತಿ, ಜನಾಂಗ,ವಸತಿ ಸ್ಥಳ, ಲಿಂಗ ಅಥವಾ ಚರ್ಮದ ಬಣ್ಣಕ್ಕೂ ಪೌರತ್ವಕ್ಕೂ ಸಂಬಂಧವಿಲ್ಲ. ಪೌರತ್ವ ಮಸೂದೆಯನ್ನು ನಾವು ವಿರೋಧಿಸುತ್ತೇವೆ ’ ಎಂದು ಅವರು ಬುಧವಾರ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News