ಹೈದರಾಬಾದ್ ಪಶುವೈದ್ಯೆಯ ಹತ್ಯೆ ಪ್ರಕರಣ: ಕೇಂದ್ರ ಸರಕಾರಕ್ಕೆ ದಿಲ್ಲಿ ಹೈಕೋರ್ಟ್ ನೋಟಿಸ್

Update: 2019-12-04 15:56 GMT

ಹೊಸದಿಲ್ಲಿ, ಡಿ.4: ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ಮಹಿಳೆಯ ಗುರುತನ್ನು ಬಹಿರಂಗಗೊಳಿಸಿದ ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಪ್ರತಿಕ್ರಿಯಿಸುವಂತೆ ಸೂಚಿಸಿ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಸಂತ್ರಸ್ತ ಮಹಿಳೆಯ ಹೆಸರು, ವಿಳಾಸ, ಫೋಟೊ, ಅವರು ಮಾಡುತ್ತಿರುವ ಉದ್ಯೋಗದ ವಿವರ ಬಹಿರಂಗಗೊಳಿಸುವುದು ಸುಪ್ರೀಂಕೋರ್ಟ್‌ನ ಕಾನೂನು ಹಾಗೂ ಭಾರತೀಯ ದಂಡ ಸಂಹಿತೆಯ ಕೆಲವು ಪರಿಚ್ಛೇದದ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರ ಯಶ್‌ದೀಪ್ ಚಹಾಲ್ ದೂರಿದ್ದರು.

ಸೂಕ್ತ ಅನುಮತಿ ಪಡೆಯದೆ ಅತ್ಯಾಚಾರ ಸಂತ್ರಸ್ತರ ಗುರುತನ್ನು ಬಹಿರಂಗಗೊಳಿಸುವಂತಿಲ್ಲ . ಇದನ್ನು ಉಲ್ಲಂಘಿಸಿದವರಿಗೆ ದಂಡದ ಜೊತೆಗೆ 2 ವರ್ಷದವರೆಗೆ ಜೈಲುಶಿಕ್ಷೆ ವಿಧಿಸಬಹುದು ಎಂದು ಐಪಿಸಿಯ ಸೆಕ್ಷನ್ 228ಎ ತಿಳಿಸಿದೆ. ಸಂತ್ರಸ್ತೆ ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಅವರ ಘನತೆಗೆ ಕುಂದು ತರಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಡಿಸೆಂಬರ್ 16ರಂದು ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News