400 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್ ಮನ್ ಆಗುವ ನಿಟ್ಟಿನಲ್ಲಿ ರೋಹಿತ್ ಶರ್ಮಾ

Update: 2019-12-04 18:10 GMT

ಹೊಸದಿಲ್ಲಿ, ಡಿ.4: ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್‌ಗಳನ್ನು ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಪಾತ್ರರಾಗಲು ರೋಹಿತ್ ಶರ್ಮಾಗೆ ಇನ್ನು ಕೇವಲ ಒಂದು ಸಿಕ್ಸರ್ ಅಗತ್ಯವಿದೆ. ರೋಹಿತ್ ಈ ಮೈಲುಗಲ್ಲು ತಲುಪಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ(476 ಸಿಕ್ಸರ್)ಹಾಗೂ ವೆಸ್ಟ್‌ಇಂಡೀಸ್ ಮಾಜಿ ನಾಯಕ ಕ್ರಿಸ್ ಗೇಲ್(534)ಈ ಸಾಧನೆ ಮಾಡಿದ್ದಾರೆ. ಸೀಮಿತ ಓವರ್ ಕ್ರಿಕೆಟ್‌ನ ಅಗ್ರ ಸರದಿಯಲ್ಲಿ ರೋಹಿತ್ ಭಾರತದ ಪ್ರಮುಖ ಆಟಗಾರನಾಗಿದ್ದಾರೆ. ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ತನಕ ಉತ್ತಮ ಪ್ರದರ್ಶನ ನೀಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಟೋಬರ್‌ನಲ್ಲಿ ನಡೆದಿದ್ದ ಸ್ವದೇಶಿ ಸರಣಿಯಲ್ಲಿ ಮೊದಲ ಬಾರಿ ಇನಿಂಗ್ಸ್ ಆರಂಭಿಸಿದ್ದ ರೋಹಿತ್ 4 ಇನಿಂಗ್ಸ್‌ಗಳಲ್ಲಿ ಚೊಚ್ಚಲ ದ್ವಿಶತಕ ಸಹಿತ ಒಟ್ಟು 529 ರನ್ ಗಳಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದರು. ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಒಟ್ಟು 19 ಸಿಕ್ಸರ್‌ಗಳನ್ನು ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದರು. ರೋಹಿತ್ ಡಿ.6ರಿಂದ ಆರಂಭವಾಗಲಿರುವ ವೆಸ್ಟ್‌ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯನ್ನಾಡಲು ಸಿದ್ಧರಾಗಿದ್ದಾರೆ. ಉಭಯ ತಂಡಗಳು ತಲಾ 3 ಪಂದ್ಯಗಳ ಟ್ವೆಂಟಿ-20 ಹಾಗೂ ಏಕದಿನ ಸರಣಿಯನ್ನು ಆಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News