ಪಾಕಿಸ್ತಾನದ ಅಂಡರ್-19 ವಿಶ್ವಕಪ್ ತಂಡದಲ್ಲಿ ನಸೀಂ ಶಾಗೆ ಸ್ಥಾನ

Update: 2019-12-04 18:15 GMT

ಕರಾಚಿ, ಡಿ.4: ಆಸ್ಟ್ರೇಲಿಯ ವಿರುದ್ಧ ಕಾಂಗರೂನಾಡಿನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿ ಎಲ್ಲರ ಗಮನ ಸೆಳೆದಿರುವ 16ರ ಹರೆಯದ ಪಾಕಿಸ್ತಾನದ ವೇಗದ ಬೌಲರ್ ನಸೀಂ ಶಾ ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಐಸಿಸಿ ಯುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ವಿಶ್ವಕಪ್‌ಗೆ ನಸೀಂ ಆಯ್ಕೆಯನ್ನು ದೃಢಪಡಿಸಿದ ಪಾಕಿಸ್ತಾನದ ಜೂನಿಯರ್ ತಂಡದ ಮುಖ್ಯ ಕೋಚ್ ಇಜಾಝ್ ಅಹ್ಮದ್,ಕಿರಿಯರ ವಿಶ್ವಕಪ್‌ಗೆ ತಯಾರಿ ನಡೆಸಲು ನಸೀಂ ಶಾರನ್ನು ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಬಿಡುಗಡೆಗೊಳಿಸುವಂತೆ ಮುಖ್ಯ ಆಯ್ಕೆಗಾರರು ಹಾಗೂ ಬೌಲಿಂಗ್ ಕೋಚ್ ವಕಾರ್ ಯೂನಿಸ್‌ಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

‘‘ನಾನು ಈ ಹಿಂದೆಯೇ ಹೇಳಿದಂತೆ ನಸೀಂ ಶಾ ನಮ್ಮ ಮುಖ್ಯ ಅಸ್ತ್ರ. ಲಾಹೋರ್‌ನಲ್ಲಿ ನಡೆಯುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಜೂನಿಯರ್ ಆಟಗಾರರಿಗೆ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಶಾ ಸೇರ್ಪಡೆಯಾಗುವುದನ್ನು ಬಯಸುತ್ತೇನೆ’’ ಎಂದರು.

ನಸೀಂ ಶಾ ಬ್ರಿಸ್ಬೇನ್‌ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು. ತನ್ನ ವೇಗದ ಬೌಲಿಂಗ್‌ನ ಮೂಲಕ ಎಲ್ಲರ ಮೇಲೆ ಪ್ರಭಾವಬೀರಿದ್ದರು. ಆದರೆ, ಅವರನ್ನು ಅಡಿಲೇಡ್‌ನಲ್ಲಿ ನಡೆದ ಎರಡನೇ ಹಾಗೂ ಹಗಲುರಾತ್ರಿ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿತ್ತು. ಇದು ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್‌ನ ನಿರ್ಧಾರ ಎಂದು ಬೌಲಿಂಗ್ ಕೋಚ್ ವಕಾರ್ ಯೂನಿಸ್ ಹೇಳಿದ್ದರು. ನಸೀಂ ಶಾ ತನ್ನ ಮೊದಲ ಪಂದ್ಯದಲ್ಲೇ ಚೊಚ್ಚಲ ವಿಕೆಟ್ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News