ಇದು ನನ್ನ ಕಥೆಯಲ್ಲ

Update: 2019-12-04 18:26 GMT

ಮಾನ್ಯರೇ,

ದಿನಾಂಕ 1-12-2019ರ ‘ವಾರ್ತಾಭಾರತಿ’ಯಲ್ಲಿ ‘ಟ್ರಿಪಲ್ ತಲಾಖ್ ಸಿನೆಮಾ ಪ್ರದರ್ಶನ’ವೆಂಬ ಸುದ್ದಿ ಪ್ರಕಟವಾಗಿದೆ. ಈ ಕುರಿತು ಮಾತನಾಡಿದ ಯಾಕುಬ್ ಖಾದರ್ ಗುಲ್ವಾಡಿ ಅವರು ಕನ್ನಡದ ಸಾಹಿತಿ ಸಾರಾ ಅಬೂಬಕ್ಕರ್ ಬರೆದ ಕಥೆಯನ್ನಾಧರಿಸಿ ಈ ಸಿನೆಮಾ ತಯಾರಿಸಲಾಗಿದೆ ಎಂದಿದ್ದಾರೆ. ನನ್ನ ಹೆಸರನ್ನು ಇದರಲ್ಲಿ ತುರುಕಿಸಿರುವುದರಿಂದ ನಾನೇ ಈ ಕುರಿತು ಸ್ಪಷ್ಟನೆ ನೀಡಬೇಕಾಗಿದೆ.

ನಾನು ಟ್ರಿಪಲ್ ತಲಾಖ್ ಕುರಿತು ಸಾಕಷ್ಟು ಲೇಖನ ಬರೆದಿದ್ದೆ. ಆದರೆ ಈ ಹೆಸರಿನ ಕಥೆ ಬರೆದಿಲ್ಲ ನನ್ನ ‘ಚಪ್ಪಲಿಗಳು’ ಎಂಬ ಕಥಾಸಂಕಲನದಲ್ಲಿ ‘ಕನಸುಗಳ ಹಾದಿಯಲ್ಲಿ’ ಎಂಬ ಒಂದು ಕತೆ ಇದ್ದು ಟ್ರಿಪಲ್ ತಲಾಖ್ ಕುರಿತ ಕಥೆಯಲ್ಲ. ಅನಾಥಾಶ್ರಮದ ಹುಡುಗಿಯೊಬ್ಬಳು ತಾನು ವಿದ್ಯಾವಂತಳಾಗಿ ಒಂದು ಉದ್ಯೋಗ ಪಡೆದು ತನ್ನ ತಾಯಿ ಮತ್ತು ತಮ್ಮನಿಗೆ ಉತ್ತಮ ಬದುಕು ನೀಡಬೇಕು ಎಂಬ ಒಂದು ಕನಸನ್ನಿಟ್ಟುಕೊಂಡು ಹಗಲಿರುಳು ಶ್ರಮಪಟ್ಟು ಶಿಕ್ಷಣ ಪಡೆಯುತ್ತಿರುತ್ತಾಳೆ. ಅವಳು ಕಾಲೇಜಿಗೆ ಹೋಗ ತೊಡಗಿದ ಬಳಿಕ ಅನಾಥಾಶ್ರಮಕ್ಕೆ ಕೊಲ್ಲಿಯ ಮಧ್ಯವಯಸ್ಕ ಶ್ರೀಮಂತನೊಬ್ಬ ಬಂದು ತಾನು ಅಲ್ಲಿನ ಹುಡುಗಿಯೊಬ್ಬಳನ್ನು ವಿವಾಹವಾಗಲು ಮುಂದೆ ಬಂದ. ಅನಾಥಾಶ್ರಮದಲ್ಲಿ ಎಲ್ಲ ಯುವ ಹೆಣ್ಣುಮಕ್ಕಳನ್ನು ಆತನ ಮುಂದೆ ಪ್ರದರ್ಶಿಸಿ ಆತನಿಂದ ಆಯ್ಕೆ ಮಾಡಿಸುತ್ತಾರೆ. ಆತನು ಈ ಹುಡುಗಿಯನ್ನೇ ಆಯ್ಕೆ ಮಾಡುತ್ತಾನೆ. ಮದುವೆಗೆ ಆಕೆಯ ಒಪ್ಪಿಗೆಯನ್ನೂ ಕೇಳದೆ ಅಲ್ಲಿನ ಅಧಿಕಾರಿಗಳು ಆಕೆಯನ್ನು ಆತನಿಗೆ ವಿವಾಹ ಮಾಡಿಕೊಡುತ್ತಾರೆ. ಆತ ಒಂದೆರಡು ತಿಂಗಳು ಆಕೆಯ ದೇಹವನ್ನು ಚೆನ್ನಾಗಿ ಉಪಯೋಗಿಸಿಕೊಂಡು ಕೊನೆಗೆ ಆಕೆಗೆ ತಿಳಿಸದೆ ಕೊಲ್ಲಿ ದೇಶಕ್ಕೆ ಹೋಗಿ ಅಲ್ಲಿ ಮಸೀದಿಯ ಮೌಲವಿಯಿಂದ ಅವಳಿಗೆ ತಲಾಖ್ ಕಳಿಸುತ್ತಾನೆ. ಆ ಮೌಲವಿ ಅವಳಿಗೆ ಫೋನಿನಲ್ಲಿ ಈ ವಿಷಯ ತಿಳಿಸುತ್ತಾನೆ. ಮದುವೆಯಾದ ಹುಡುಗಿಗೆ ಅನಾಥಾಶ್ರಮದಲ್ಲಿರಲು ನಿಯಮವಿಲ್ಲವೆಂದು ಅವಳನ್ನು ಅನಾಥಾಶ್ರಮದಿಂದ ಹೊರಹಾಕುತ್ತಾರೆ.

ಈ ಇಡೀ ಕಥೆಯಲ್ಲಿ ‘ಟ್ರಿಪಲ್ ತಲಾಖ್’ ಎಂಬ ಒಂದೇ ಒಂದು ಶಬ್ದ ಎಲ್ಲಿಯೂ ಇಲ್ಲ. ಸಿನೆಮಾ ಮಾಡುವವರು ನನ್ನ ಹೆಸರಿನ ಕಥೆಯನ್ನೆತ್ತಿಕೊಂಡು ತಮಗೆ ಇಷ್ಟವಿದ್ದಂತೆ ಅದನ್ನು ತಿರುಚಿ ಬದಲಾಯಿಸಿಕೊಂಡು ತನ್ನದೇ ಸಿನೆಮಾ ಎಂದು ಹೆಸರು ಕೊಡಲಿ. ಇದರಲ್ಲಿ ನನ್ನ ಹೆಸರನ್ನು ಯಾಕೆ ತುರುಕಬೇಕು?

ಈ ಕಥೆ ಒಂದೆರಡು ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಘಟನೆಯಾಗಿದೆ. ಇದು ಇಡೀ ದೇಶದಲ್ಲಿ ಸುದ್ದಿಯಾಗಿ ಕೊನೆಗೆ ಸರಕಾರ ‘‘ಆ ಮನುಷ್ಯ ಇನ್ನು ಇಂಡಿಯಾಕ್ಕೆ ಕಾಲಿಟ್ಟರೆ ಬಂಧಿಸಬೇಕು’’ ಎಂಬ ವಾರಂಟ್ ಹೊರಡಿಸಿದೆ. ಹದಿನೇಳು ವಯಸ್ಸು ತುಂಬದ ಹುಡುಗಿಯ ಮೇಲೆ ನಡೆದ ಒಂದು ದೌರ್ಜನ್ಯದ ಕಥೆ ಇದಾಗಿದೆಯೇ ಹೊರತು ಸರಕಾರ ಹೊರತಂದ ಟ್ರಿಪಲ್ ತಲಾಖ್ ವಿರೋಧದ ನಿಯಮಕ್ಕೂ ಈ ಕಥೆಗೆ ಏನೇನೂ ಸಂಬಂಧವಿಲ್ಲ. ಆದುದರಿಂದ ಇದು ನನ್ನ ಕಥೆಯಲ್ಲ. ನಾನು ಇದನ್ನು ಪ್ರತಿಭಟಿಸುತ್ತೇನೆ.

Writer - ಡಾ. ಸಾರಾ ಅಬೂಬಕ್ಕರ್

contributor

Editor - ಡಾ. ಸಾರಾ ಅಬೂಬಕ್ಕರ್

contributor

Similar News