ರಾಜ್ಯದ 110 ದೇವಾಲಯಗಳಲ್ಲಿ ಎಪ್ರಿಲ್ 26ರಂದು ಸಾಮೂಹಿಕ ವಿವಾಹ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2019-12-05 07:38 GMT

ಉಡುಪಿ, ಡಿ.5: ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಗೊಳಪಡುವ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಎಪ್ರಿಲ್ 26ರಂದು ಸಾಮೂಹಿಕ ವಿವಾಹಗಳನ್ನು ನಡೆಸಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಎ ವರ್ಗದ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸುವ ಕುರಿತಂತೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ವಿವಿಧ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ, ಉತ್ತಮ ಆದಾಯವಿರುವ ರಾಜ್ಯದ 110 ದೇವಾಲಯಗಳಲ್ಲಿ 2020ರ ಎಪ್ರಿಲ್ 26 ರಂದು ಸಾಮೂಹಿಕ ವಿವಾಹ ನಡೆಸಲು ದಿನಾಂಕ ನಿಗದಿಪಡಿಸಿದ್ದು, ವಿವಾಹವಾಗುವ ದಂಪತಿಗಳಿಗೆ ಎಪಿಎಲ್ , ಬಿಪಿಎಲ್ ಎಂಬ ಮಾನದಂಡ ಇರುವುದಿಲ್ಲ ಎಂದು ಸಚಿವರು ವಿವರಿಸಿದರು.

 ವಿವಾಹವಾಗುವ ವರನಿಗೆ ಪೋತ್ಸಾಹಧನವಾಗಿ ( ಹೂವಿನ ಹಾರ, ಪಂಚೆ , ಶರ್ಟ್ ಮತ್ತು ಶಲ್ಯಕ್ಕಾಗಿ) ರೂ. 5,000 ಮತ್ತು ವಧುವಿಗೆ ( ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ ) 10,000 ಹಾಗೂ ವಧುವಿಗೆ ಚಿನ್ನದ ತಾಳಿ, ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ )ಗಾಗಿ 40,000 ರೂ.ಗಳನ್ನು ನೀಡಲಾಗುವುದು. ಈ ಮೊತ್ತವನ್ನು ವಿವಾಹವಾದ ದಿನವೇ ಸಂಬಂದಪಟ್ಟ ವಧು ವರರ ಖಾತೆಗೆ ಆರ್.ಟಿ.ಜಿ.ಎಸ್. ಮೂಲಕ ಜಮೆ ಮಾಡಲಾಗುವುದು ಹಾಗೂ ವಿವಾಹಕ್ಕೆ ಆಗಮಿಸುವ ವಧು ವರರ ಬಂಧುಗಳಿಗೆ/ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆಯನ್ನು ಹಾಗೂ ಇತರ ವ್ಯವಸ್ಥೆಗೆ ತಗಲುವ ವೆಚ್ಚವನ್ನು ದೇವಲಯಗಳ ನಿಧಿಯಿಂದ ಭರಿಸಲಾಗುವುದು ಎಂದು ಹೇಳಿದರು.

 ಸಾಮೂಹಿಕ ವಿವಾಹ ನಡೆಯುವ ಕುರಿತಂತೆ  ಸಂಬಂಧಪಟ್ಟ ಎಲ್ಲ ದೇವಾಲಯಗಳ ಆವರಣದಲ್ಲಿ ಮಾಹಿತಿಯನ್ನು ಪ್ರಚುರಪಡಿಸುವಂತೆ ತಿಳಿಸಿದ ಮುಜರಾಯಿ ಸಚಿವರು,  ಮಾರ್ಚ್  27 ವಧುವರರ ವಿವರಗಳನ್ನು ನೋಂದಾಯಿಸಿಕೊಳ್ಳಲು ಕೊನೆಯ ದಿನವಾಗಿದೆ. ಎಪ್ರಿಲ್ 1ರಂದು ನೋಂದಾಯಿಸಿಕೊಂಡ ವಧು ವರರ ವಿವರಗಳನ್ನು ದೇವಾಲಯಗಳಲ್ಲಿ ಪ್ರಕಟಪಡಿಸಲಾಗುವುದು, ಎ.6 ವಧು ವರರ ಪಟ್ಟಿಗೆ ಆಕ್ಷೇಪ  ಸಲ್ಲಿಸಲು ಕೊನೆಯ ದಿನವಾಗಿದ್ದು, ಎ.11ರಂದು ಅಂತಿಮ ವಧುವರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು. 

ಸಾಮೂಹಿಕ ವಿವಾಹದಲ್ಲಿ ಮೊದಲ ಬಾರಿಗೆ ವಿವಾಹವಾಗುವವರಿಗೆ ಮಾತ್ರ ಅವಕಾಶವಿದ್ದು, ಎರಡನೇ ಮದುವೆ ಆಗುವವರಿಗೆ ಅವಕಾಶವಿಲ್ಲ, ವಧು ವರರ ನಿಯಮಾನುಸಾರ ಪ್ರಾಪ್ತ ವಯಸ್ಕರಾಗಿದ್ದು, ಈ ಬಗ್ಗೆ ಸರ್ಕಾರದ ಅಧಿಕೃತ ದಾಖಲೆಗಳನ್ನು ನೀಡಬೇಕು. ವಿವಾಹ ನಡೆಯುವ ಸ್ಥಳದಲ್ಲೇ ವಿವಾಹ ನೋಂದಣಾಧಿಕಾರಿಗಳಿಂದ ವಿವಾಹ ನೋಂದಣಿ ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಎಪ್ರಿಲ್ 26ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ, ಪೇಜಾವರಶ್ರೀ, ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ, ರವಿಶಂಕರ್ ಗುರೂಜಿ, ಇನ್ಫೋಸಿಸ್ ನ ಸುಧಾಮೂರ್ತಿ, ಪ್ರಮುಖ ವೀರಶೈವ ಮಠಾಧೀಶರು, ಒಕ್ಕಲಿಗ ಗುರುಗಳು ಸೇರಿದಂತೆ ಪ್ರಮುಖ ಧಾರ್ಮಿಕ ಗುರುಗಳು ಸಾಕ್ಷಿಯಾಗಲಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಾಮಾಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ಶೀಘ್ರದಲ್ಲಿಯೇ ಟೋಲ್ ಫ್ರೀ ಸಂಖ್ಯೆಯನ್ನು ನೀಡಲಿದ್ದು, ಬೆಳಗ್ಗೆ 10ರಿಂದ 6 ಗಂಟೆಯವರೆಗೆ ಸಾರ್ವಜನಿಕರು ಕರೆ ಮಾಡಿ  ವಿವಾಹಕ್ಕೆ ನಿಗದಿಪಡಿಸಿರುವ ಅರ್ಹತೆಗಳು ಮತ್ತಿತರ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತಂತೆ ರಾಜ್ಯಾದಂತ ಸರ್ಕಾರದ ವಿವಿಧ ಜಾಹೀರಾತು ಫಲಕಗಳಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಜಾಹೀರಾತು ಸಿದ್ದಪಡಿಸಿ, ಅಳವಡಿಸುವ ಮೂಲಕ, ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.  

ಅನಿವಾರ್ಯ ಕಾರಣಗಳಿಂದ ಎಪ್ರಿಲ್ 26ರಂದು ಸಾಮೂಹಿ ವಿವಾಹ ನಡೆಸಲು ಸಾಧ್ಯವಾಗದ ದೇವಾಲಯಗಳಲ್ಲಿ ಮೇ 24ರಂದು ವಿವಾಹಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಸಾಮೂಹಿಕ ವಿವಾಹ ಏರ್ಪಡಿಸುವ ಕುರಿತಂತೆ ಸಂಬಂದಪಟ್ಟ ದೇವಾಲಯಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು,  ಶಾಸಕರು ಮತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ,  ಅವರ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಪಡೆದು ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸುವಂತೆ  ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.  

ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಎಲ್ಲಾ ತಾಲೂಕುಗಳ ತಹಶೀಲ್ದಾರರು ಮತ್ತು ವಿವಿಧ ದೇವಾಲಯಗಳ ಆಡಳಿತ ಮೊಕ್ತೇಸರರು, ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಧಾರ್ಮಿಕ ಧತ್ತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News