ಡಿ.7ಕ್ಕೆ ಕಾತ್ಯಾಯಿನಿ ಕುಂಜಿಬೆಟ್ಟು ಅವರ 11 ಕೃತಿಗಳ ಬಿಡುಗಡೆ

Update: 2019-12-05 08:33 GMT

ಉಡುಪಿ, ಡಿ.4: ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಂಜಿಎಂ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ ಉಡುಪಿ, ಪಂಚಮಿ ಟ್ರಸ್ಟ್ ಉಡುಪಿ ಸುಹಾಸಂ ಮತ್ತು ವಿಟ್ಲ ಜೋಷಿ ಪ್ರತಿಷ್ಠಾನಗಳ ಸಹಯೋಗದಲ್ಲಿ ಡಿ.7ರಂದು ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರ ಹನ್ನೊಂದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಡಿ.7ರ ಸಂಜೆ 4 ಗಂಟೆಗೆ ರವಿಕಿರಣ ಮಣಿಪಾಲ ಇವರ ಹಿಂದೂಸ್ತಾನಿ ಸಂಗೀತ ಗಾಯನ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ.ಎಂ.ಜಿ.ವಿಜಯ ಹಾಗೂ ಮಾಲತಿದೇವಿ ಚಾಲನೆ ನೀಡುವರು. ಪ್ರೊ.ಶಂಕರ್ ಹಾಗೂ ಯು.ವಿಶ್ವನಾಥ ಶೆಣೈ ಉಪಸ್ಥಿತರಿರುವರು.

ಬಳಿಕ ನಡೆಯುವ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಾಡಿನ ಪ್ರಸಿದ್ಧ ಕವಿ ಡಾ.ಸಿದ್ಧಲಿಂಗಯ್ಯ ಅವರು ಕಾತ್ಯಾಯಿನಿ ಕುಂಜಿಬೆಟ್ಟು ಅವರ 11 ಕೃತಿಗಳನ್ನು ಲೋಕಾರ್ಪಣೆಗೊಳಿಸುವರು. ಮಣಿಪಾಲ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಂ ಅಧ್ಯಕ್ಷತೆ ವಹಿಸಲಿದ್ದಾರೆ.

ಖ್ಯಾತ ವಿಮರ್ಶಕರಾಗಿರುವ ಚಿಂತಕ ಲಕ್ಷ್ಮೀಶ ತೋಳ್ಪಾಡಿ, ಶೂದ್ರ ಶ್ರೀನಿವಾಸ, ಎಚ್.ದಂಡಪ್ಪ, ಎಚ್.ಗೋಪಾಲಕೃಷ್ಣ ನಾಯರಿ, ಮುದಲ್ ವಿಜಯ್ ಹಾಗೂ ಡಾ.ನಿಕೇತನ ವಿವಿಧ ಕೃತಿಗಳನ್ನು ಪರಿಚಯಿಸಲಿದ್ದಾರೆ. ಕೊನೆಯಲ್ಲಿ ಭಾಗೀರಥಿ ಬಾಯಿ ಕದಂ ನಿರ್ದೇಶನದಲ್ಲಿ ವೈದೇಹಿಯವರ ‘ಕಮಲಾದೇವಿ ಚಟ್ಟೋಪಾಧ್ಯಾಯ-ಕೆಲವು ನೆನಪು’ ನಾಟಕದ ಪ್ರದರ್ಶನ ನಡೆಯಲಿದೆ.

ಈ ನಾಟಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಚಾಲನೆ ನೀಡುವರು ಎಂದು ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News