ಅನುದಾನಿತ ಶಾಲೆಗಳು- ಶಿಕ್ಷಕರ ಬೇಡಿಕೆ ಬಗ್ಗೆ ಅಧಿವೇಶನದ ಗಮನಕ್ಕೆ: ಐವನ್ ಡಿಸೋಜಾ

Update: 2019-12-05 12:28 GMT

ಮಂಗಳೂರು, ಡಿ. 5: ಅನುದಾನಿತ ಪ್ರಾಥಮಿಕ ಶಾಲೆಗಳ ಹಾಗೂ ಶಿಕ್ಷಕರ ಬೇಡಿಕೆಗಳ ಕುರಿತು ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.

ಅವರು ಗುರುವಾರ ಇಲ್ಲಿನ ಪುರಭವನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ. ಶಾಖೆ ಏರ್ಪಡಿಸಿದ ‘ಕ್ಷ-ಕಿರಣ-5, 2019’ ಸಮಾವೇಶ, ವಿಚಾರಗೋಷ್ಠಿ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಾಥಮಿಕ ಶಿಕ್ಷಣದಲ್ಲಿ ಸರ್ಕಾರಿ ಹಾಗೂ ಅನುದಾನಿತ ಎಂದು ಸರ್ಕಾರ ತಾರತಮ್ಯ ಮಾಡಬಾರದು. ಸರ್ಕಾರಿ ಶಾಲೆಗಳಿಗೆ ಎಲ್ಲ ಸೌಲಭ್ಯಗಳನ್ನೂ ನೀಡಿದರೂ ಅನುದಾನಿತ ಶಾಲೆಗಳನ್ನು ಕಡೆಗಣಿಸುವುದು ಯಾವ ನ್ಯಾಯ? ಹಾಗಾದರೆ ಕಡ್ಡಾಯ ಶಿಕ್ಷಣದ ಉದ್ದೇಶ ಏನು ಎಂದು ಐವನ್ ಡಿಸೋಜಾ ಪ್ರಶ್ನಿಸಿರು.

ಪ್ರಾಥಮಿಕದಲ್ಲಿ ಸರ್ಕಾರಿ ಹಾಗೂ ಖಾಸಗಿ ಎಂದು ವಿಭಾಗಿಸಿದ ಕಾರಣಕ್ಕೆ ಶಿಕ್ಷಣದಲ್ಲಿ ಏಕರೂಪತೆ ಇಲ್ಲ ಎಂದು ಹೇಳಿದ ಅವರು ಇದರಿಂದಾಗಿ ಗುಣಮಟ್ಟದ ಶಿಕ್ಷಣಕ್ಕೆ ತಡೆಯಾಗಿದೆ ಎಂದರು.

ಅನುದಾನಿತ ಶಿಕ್ಷಕರ ಸಂಘದ ದ.ಕ. ಶಾಖೆಯ ಅಧ್ಯಕ್ಷ ಕೆ.ಎಂ.ಕೆ.ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಒಂದನೇ ತರಗತಿಯಿಂದಲೇ ಅನುದಾನ ಸಹಿತ ಆಂಗ್ಲ ಮಾಧ್ಯಮದಲ್ಲಿ ತರಗತಿ ನಡೆಸಲು ಅನುದಾನಿತ ಶಾಲೆಗಳಿಗೆ ಸರ್ಕಾರ ಅವಕಾಶ ನೀಡಬೇಕು. ಅಲ್ಲದೆ ಸರ್ಕಾರಿ ಶಾಲೆಗಳಿಗೆ ನೀಡುವ ಎಲ್ಲ ರೀತಿಯ ಸವಲತ್ತನ್ನು ಅನುದಾನಿತ ಶಾಲೆಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು. ಸಂಘದ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಜಿ.ಪಂ. ಸದಸ್ಯೆ ಧನಲಕ್ಷ್ಮಿ ಗಟ್ಟಿ, ಶಿಕ್ಷಕರ ಸಂಘಟನೆಯ ಪ್ರಮುಖರಾದ ಜಯರಾಮ, ರಾಮಚಂದ್ರ ರಾವ್, ಚಂಚಲಾಕ್ಷಿ, ಶೈಲಾ ಹೆಗ್ಡೆ, ಶಶಿಕಾಂತ್, ಜಿಲ್ಲಾ ಸಂಘದ ಕಾರ್ಯದರ್ಶಿ ಆಲ್ವಿನ್ ಲ್ಯಾನ್ಸಿ ರಾಡ್ರಿಗಸ್, ಕೋಶಾಧಿಕಾರಿ ಸುಬ್ರಾಯ ಕಾರಂತ ಉಪಸ್ಥಿತರಿದ್ದರು. 

ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ

ಅವಕಾಶ ಸೇರಿದಂತೆ ವಿವಿಧ 12 ಬೇಡಿಕೆಗಳ ಮನವಿಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರಿಗೆ ಶಿಕ್ಷಕರ ಸಂಘಟನೆಯಿಂದ ಸಲ್ಲಿಸಲಾಯಿತು. ಕಾಲ್ಪನಿಕ ವೇತನ ಜಾರಿಗೊಳಿಸಲು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರ ಸದನ ಸಮಿತಿ ನೀಡಿರುವ ವರದಿಯನ್ನು ಯಥಾವತ್ ಜಾರಿಗೊಳಿಸಬೇಕು. ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. 1ರಿಂದ 7ನೇ ತರಗತಿಯ ಅನುದಾನಿತ ಪ್ರಾಥಮಿಕ ಶಾಲಾ ಮಕ್ಕಳಿಗೂ ಉಚಿತ ಸಮವಸ್ತ್ರ, ಶೂ, ಸಾಕ್ಸ್ ನೀಡಬೇಕು ಹಾಗೂ ಕರ್ನಾಟಕ ದರ್ಶನ ಪ್ರವಾಸ ಭಾಗ್ಯ ಕಲ್ಪಿಸಬೇಕು. ಅನುದಾನಿತ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ, ವಿಶೇಷ ಬಡ್ತಿ ನೀಡಬೇಕು. ಈ ಶಿಕ್ಷಕರಿಗೆ ಆರೋಗ್ಯ ವಿಮೆ ಕಲ್ಪಿಸಬೇಕು. ಹೆಚ್ಚುವರಿ ಶಿಕ್ಷಕರ ಮರು ಹಂಚಿಕೆ ಮಾಡಬೇಕು. ಶಾಲಾ ಶಿಕ್ಷಕರಿಗೆ ರಜೆ ನಗದೀಕರಣ ಹಾಗೂ ಇತರೆ ಸೌಲಭ್ಯಗಳಿಗೆ ಪ್ರತ್ಯೇಕ ಅನುದಾನ ನೀಡಬೇಕು. ತರಗತಿಗೊಬ್ಬರಂತೆ ಶಿಕ್ಷಕರನ್ನು ನೇಮಕ ಮಾಡಬೇಕು. ಶಿಕ್ಷಕರೇ ಇಲ್ಲದ ಅನುದಾನಿತ ಶೂನ್ಯ ಶಿಕ್ಷಕ ಶಾಲೆಗಳಿಗೆ ಕೂಡಲೇ ಶಿಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News