ನಾಗರಿಕರ ಖಾಸಗಿತನ ಹಕ್ಕು ರಕ್ಷಣೆಗೆ ಸರಕಾರವು ಬದ್ಧ: ರವಿಶಂಕರ್ ಪ್ರಸಾದ್

Update: 2019-12-05 14:18 GMT

ಹೊಸದಿಲ್ಲಿ,ಡಿ.5: ಸರಕಾರವು ತನ್ನ ಪ್ರಜೆಗಳ ಖಾಸಗಿತನದ ಮೂಲಭೂತ ಹಕ್ಕನ್ನು ರಕ್ಷಿಸಲು ಬದ್ಧವಾಗಿದೆ ಮತ್ತು ಪ್ರಜೆಗಳ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂಬ ವರದಿಗಳು ಸಂಪೂರ್ಣವಾಗಿ ದಾರಿ ತಪ್ಪಿಸುವಂಥದ್ದಾಗಿವೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ನಾಗರಿಕರ ದತ್ತಾಂಶಗಳ ಸುರಕ್ಷತೆ ಕುರಿತು ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು,ಸರಕಾರವು ಕಾನೂನಿನ ನಿಯಮಗಳು ಮತ್ತು ಸ್ಥಾಪಿತ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದೆ. ಯಾವುದೇ ಅಮಾಯಕ ಪ್ರಜೆಗೆ ಕಿರುಕುಳವಾಗದಂತೆ ಮತ್ತು ಆತನ/ಆಕೆಯ ಖಾಸಗಿತನದ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಪ್ರಜೆಗಳ ಮೇಲೆ ಕಣ್ಗಾವಲು ಇರಿಸುವಲ್ಲಿ ಭಾರತವು ರಷ್ಯಾ ಮತ್ತು ಚೀನಾ ನಂತರದ ಸ್ಥಾನದಲ್ಲಿದೆ ಎಂಬ ಬ್ರಿಟನ್ನಿನ ಸಂಶೋಧನಾ ಸಂಸ್ಥೆ ಕಂಪ್ಯಾರಿಟೆಕ್‌ನ ಹೇಳಿಕೆಯ ಕುರಿತು ಮಾಧ್ಯಮ ವರದಿಗಳನ್ನು ಪ್ರಸ್ತಾಪಿಸಿದ ಪ್ರಸಾದ್,ಮಾಧ್ಯಮ ವರದಿಗಳ ಆಧಾರದಲ್ಲಿ ಇಂತಹ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ ಮತ್ತು ಅದು ಪ್ರಶ್ನಾರ್ಹವಾಗಿದೆ. ದತ್ತಾಂಶ ರಕ್ಷಣೆ ಮಸೂದೆ ಮತ್ತು ದತ್ತಾಂಶ ರಕ್ಷಣಾ ಪ್ರಾಧಿಕಾರ ಇಲ್ಲದಿರುವುದನ್ನು ಈ ವರದಿಗಳಲ್ಲಿ ಉಲ್ಲೇಖಿಸಲಾಗಿದೆ,ಆದರೆ ಐಟಿ ಕಾಯ್ದೆಯಡಿ ಸಾಕಷ್ಟು ಸೂಕ್ತ ನಿಬಂಧನೆಗಳಿವೆ ಮತ್ತು ದತ್ತಾಂಶ ರಕ್ಷಣೆಗಾಗಿ ಕಾನೂನು ತರುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

123 ಕೋಟಿ ಜನರ ಮಾಹಿತಿಗಳನ್ನು ಒಳಗೊಂಡಿರುವ ಆಧಾರ್ ದತ್ತಾಂಶ ಕೋಶದ ಬಗ್ಗೆಯೂ ಉಲ್ಲೇಖಿಸಲಾಗಿದ್ದು,ಅದು ಖರೀದಿಗಳು,ಬ್ಯಾಂಕ್ ಖಾತೆಗಳು,ವಿಮೆ ಇತ್ಯಾದಿಗಳಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ ಎನ್ನುವುದು ತಪ್ಪುಗ್ರಹಿಕೆಯಾಗಿದೆ ಎಂದರು.

ಆಧಾರ್ ದತ್ತಾಂಶ ಕೋಶವನ್ನು ಭೇದಿಸಿರುವ ಯಾವುದೇ ಘಟನೆಯನ್ನು ನಿರಾಕರಿಸಿದ ಅವರು,ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಪ್ರಬಲ ಸುರಕ್ಷಾ ವ್ಯವಸ್ಥೆಯನ್ನು ಹೊಂದಿದ್ದು,ದತ್ತಾಂಶಗಳ ಗೌಪ್ಯವನ್ನು ಕಾಯ್ದುಕೊಳ್ಳಲು ಇದನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ತಿಳಿಸಿದರು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು,ಖಾಸಗಿತನವು ಮೂಲಭೂತ ಹಕ್ಕು ಆಗಿದೆ ಮತ್ತು ಅದನ್ನು ಗೌರವಿಸಬೇಕು ,ಆದರೆ ಭಯೋತ್ಪಾದಕರು,ಭ್ರಷ್ಟರು ಅಥವಾ ಕ್ರಿಮಿನಲ್‌ಗಳು ಖಾಸಗಿತನದ ಹಕ್ಕು ಹೊಂದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News