ಹಿಂದಿ ಮತ್ತು ಇತರ ಪ್ರಾದೇಶಿಕ ಮಾತೃಭಾಷೆಗಳ 485 ಅಭ್ಯರ್ಥಿಗಳು ಉತ್ತೀರ್ಣ:ಸರಕಾರ

Update: 2019-12-05 17:27 GMT
 ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.5: ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳನ್ನು ಮಾತೃಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದ 485 ಅಭ್ಯರ್ಥಿಗಳು 2018ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಗಳ ಮೂಲಕ ಆಯ್ಕೆಯಾಗಿದ್ದಾರೆ ಎಂದು ಸರಕಾರವು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದೆ. 2018ರ ಪರೀಕ್ಷೆಗಳ ಆಧಾರದಲ್ಲಿ ಒಟ್ಟು 812 ಅಭ್ಯರ್ಥಿಗಳನ್ನು ನಾಗರಿಕ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಅದು ಹೇಳಿದೆ.

2017, 2016, 2015 ಮತ್ತು 2014ರಲ್ಲಿ ಅನುಕ್ರಮವಾಗಿ 1,056,1,209,1,164 ಮತ್ತು 1,363 ಅಭ್ಯರ್ಥಿಗಳನ್ನು ಈ ಹುದ್ದೆಗಳಿಗಾಗಿ ಆಯ್ಕೆ ಮಾಡಲಾಗಿದ್ದು,ಈ ಪೈಕಿ ಅನುಕ್ರಮವಾಗಿ 633,664,643 ಮತ್ತು 743 ಅಭ್ಯರ್ಥಿಗಳು ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳನ್ನು ತಮ್ಮ ಮಾತೃಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು ಎಂದು ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು.

 ಲಿಂಗ ಸಮತೋಲನವನ್ನು ಪ್ರತಿಬಿಂಬಿಸುವ ಕಾರ್ಯಪಡೆಯನ್ನು ಹೊಂದಿರಲು ಸರಕಾರವು ಶ್ರಮಿಸುತ್ತಿದೆ ಮತ್ತು ನಾಗರಿಕ ಸೇವೆ ಪರೀಕ್ಷೆಗಳಿಗೆ ಹಾಜರಾಗುವಂತೆ ಮಹಿಳೆಯರನ್ನು ಉತ್ತೇಜಿಸಲಾಗುತ್ತಿದೆ. ಅವರಿಗೆ ಪರೀಕ್ಷಾ ಶುಲ್ಕಗಳಿಂದ ವಿನಾಯಿತಿಯನ್ನು ನೀಡಲಾಗಿದೆ ಎಂದು ತಿಳಿಸಿದ ಅವರು, ಮರುಮದುವೆಯಾಗಿರದ ವಿಧವೆಯರು, ವಿಚ್ಛೇದಿತೆಯರು ಮತ್ತು ಕಾನೂನಿಗನುಗುಣವಾಗಿ ತಮ್ಮ ಗಂಡಂದಿರಿಂದ ಪ್ರತ್ಯೇಕವಾಗಿರುವ ಮಹಿಳೆಯರು ಗ್ರೂಪ್ ಸಿ ಮತ್ತು ಈಗಲೂ ಅಸ್ತಿತ್ವದಲ್ಲಿರುವ ಹಿಂದಿನ ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿಯನ್ನು 35 ವರ್ಷಗಳವರೆಗೆ (ಎಸ್‌ಸಿ/ಎಸ್‌ಟಿಗಳಿಗೆ 40 ವರ್ಷದವರೆಗೆ) ಸಡಿಲಿಸಲಾಗಿದೆ ಎಂದರು.

ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಲಾಗುವ ಹುದ್ದೆಗಳನ್ನು ಹೊರತುಪಡಿಸಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೂ ಈ ಸಡಿಲಿಕೆಯು ಅನ್ವಯಿಸುತ್ತದೆ ಎಂದ ಸಚಿವರು,ಆದರೆ ಇದು ಕೇಂದ್ರ ಸರಕಾರದ ಸಿವಿಲ್ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News