ಇಂದು ಭಾರತ -ವಿಂಡೀಸ್ ಮೊದಲ ಟ್ವೆಂಟಿ 20 ಪಂದ್ಯ

Update: 2019-12-05 18:11 GMT

ಹೈದರಾಬಾದ್, ಡಿ.5: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನಲ್ಲಿ ಶುಕ್ರವಾರ ನಡೆಯಲಿದೆ.

2019ರಲ್ಲಿ ಇದೊಂದು ಎರಡನೇ ಸುತ್ತಿನ ಹಣಾಹಣಿ. 50 ಓವರ್‌ಗಳ ವಿಶ್ವಕಪ್ ಮುಗಿದ ಬಳಿಕ ಭಾರತ ತಂಡ ವಿಂಡೀಸ್‌ಗೆ ಪ್ರವಾಸ ಕೈಗೊಂಡಿತ್ತು. ಈ ಮುಖಾಮುಖಿಯಲ್ಲಿ ಭಾರತ ಟ್ವೆಂಟಿ-20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿತ್ತು.

ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ವಿವಿಧ ತಂಡಗಳು ತಯಾರಿ ನಡೆಸುತ್ತಿವೆ. ಭಾರತ ಕಳೆದ ಕೆಲವು ಪಂದ್ಯಗಳಲ್ಲಿ ತನ್ನ ಬ್ಯಾಟಿಂಗ್ ಸಂಯೋಜನೆಯನ್ನು ಹೆಚ್ಚು ಕಡಿಮೆ ಗುರುತಿಸಿದೆ. ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿದ್ದಾರೆ ಮತ್ತು ಮುಂಬರುವ ಪಂದ್ಯಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಲು ಎದುರು ನೋಡುತ್ತಿದ್ದಾರೆ.

 ಭಾರತಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರು ಈ ಸ್ಥಾನಕ್ಕೆ ನಿಯೋಜನೆಗೊಂಡಿದ್ದರೂ , ಇದೀಗ ಧವನ್‌ಗಾಯದಿಂದಾಗಿ ಹೊರಗುಳಿಯುವಂತಾಗಿದೆ. ಬಾಂಗ್ಲಾದೇಶ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದಾಗ ಕರ್ನಾಟಕದ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್‌ಗೆ ಅವಕಾಶ ಲಭಿಸಿತು. ಇದೀಗ ಕೊಹ್ಲಿ ವಾಪಸಾಗಿದ್ದಾರೆ. ಆದರೆ ಧವನ್ ಗಾಯದಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ರೋಹಿತ್ ಜೊತೆಗೆ ರಾಹುಲ್‌ಗೆ ಶಾಶ್ವತ ಓಪನರ್ ಆಗಿ ಸ್ಥಾನ ಭದ್ರಪಡಿಸಲು ಕನಿಷ್ಠ ಮೂರು ಅವಕಾಶವನ್ನು ನಿರೀಕ್ಷಿಸಲಾಗಿದೆ.

ಇನ್ನೊಬ್ಬ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಒತ್ತಡಕ್ಕೆ ಒಳಗಾಗಿದ್ದಾರೆ. ಅವರ ಬ್ಯಾಟ್‌ನಿಂದ ರನ್ ಹರಿದು ಬರುತ್ತಿಲ್ಲ. ಅವರು ತನ್ನ ನೈಜ ಆಟದ ಮೂಲಕ ಫಾರ್ಮ್ ಕಂಡುಕೊಳ್ಳಬೇಕಾಗಿದೆ.

ಕೊಹ್ಲಿ ಯುವ ವಿಕೆಟ್ ಕೀಪರ್ ಪಂತ್ ಬೆನ್ನಿಗೆ ನಿಂತಿದ್ದಾರೆ. ಪಂತ್ ಮೇಲೆ ಒತ್ತಡ ಹೇರುವುದು ಅನ್ಯಾಯ ಎಂದು ಕೊಹ್ಲಿ ಹೇಳಿದ್ದಾರೆ. ಅವರಿಗೆ ಸ್ಥಾನ ಭದ್ರಪಡಿಸಲು ಇನ್ನಷ್ಟು ಅವಕಾಶ ನೀಡಬೇಕಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ. ಭಾರತದ ಬ್ಯಾಟಿಂಗ್ ವಿಭಾಗ ಚೆನ್ನಾಗಿಲ್ಲ. ಕಳೆದ 14 ಪಂದ್ಯಗಳ ಪೈಕಿ 7 ರಲ್ಲಿ ಭಾರತ ಸೋತಿದೆ. ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ನಮ್ಮ ಬ್ಯಾಟಿಂಗ್ ಚೆನ್ನಾಗಿದೆ. ಮತ್ತು ಕಡಿಮೆ ಮೊತ್ತ ದಾಖಲಿಸಿ ಪಂದ್ಯವನ್ನು ಗೆಲ್ಲುತ್ತೇವೆ ಎಂದು ನಾನು ಭಾವಿಸುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಹೇಳಿದ್ದಾರೆ.

  

ಬೌಲಿಂಗ್ ವಿಭಾಗದ ಬಗ್ಗೆ ಗೊಂದಲ ಇದೆ. ಭುವನೇಶ್ವರ ಕುಮಾರ್ ಮತ್ತು ಮುಹಮ್ಮದ್ ಶಮಿ , ದೀಪಕ್ ಚಹರ್ ತಂಡಕ್ಕೆ ಮರಳಿದ್ದಾರೆ. ಚಹರ್ ತನ್ನ ಕೊನೆಯ ಟ್ವೆಂಟಿ 20 ಯಲ್ಲಿ ಹ್ಯಾಟ್ರಿಕ್ ಸಾಧಿಸಿದ್ದರು. ಮೊದಲ ಪಂದ್ಯದಲ್ಲಿ ಭಾರತದ ಇಬ್ಬರು ವೇಗಿಗಳು ಆಡುವುದನ್ನು ನಿರೀಕ್ಷಿಸಲಾಗಿದೆ. ಆದರೆ ಅಂತಿಮ ಹನ್ನೊಂದರಲ್ಲಿ ಅವಕಾಶ ಪಡೆಯಲಿರುವ ಬೌಲರ್‌ಗಳು ಯಾರೆಂದು ಇನ್ನೂ ಗೊತ್ತಾಗಿಲ್ಲ. ಶಮಿ 2017ರಿಂದ ಟ್ವೆಂಟಿ-20 ಪಂದ್ಯಗಳನ್ನು ಆಡಿಲ್ಲ. ಆದರೆ ಆಸ್ಟ್ರೇಲಿಯದಲ್ಲಿ ವೇಗಿಗಳ ಸ್ನೇಹಿ ವಾತಾವರಣಕ್ಕೆ ಹೊಂದಿಕೊಳ್ಳಲು ಶಮಿಗೆ ಸಾಧ್ಯ ಎಂದು ಕೊಹ್ಲಿ ಹೇಳಿದ್ದಾರೆ. ಭುವನೇಶ್ವರ ಕುಮಾರ್ ಗಾಯದಿಂದ ಚೇತರಿಸಿಕೊಂಡು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್ ತಂಡಕ್ಕೆ ವಾಪಸಾಗಿದ್ದಾರೆ. ಆದರೆ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜ ಇವರಲ್ಲಿ ಅವಕಾಶ ಯಾರಿಗೆ ಎನ್ನುವುದು ಸ್ಪಷ್ಟಗೊಂಡಿಲ್ಲ.

ಕಳೆದ ಭಾರತ ವಿರುದ್ಧದ ಸರಣಿಯ ಬಳಿಕ ವೆಸ್ಟ್‌ಇಂಡೀಸ್ ತಂಡದಲ್ಲಿ ಕೆಲವೊಂದು ಬದಲಾವಣೆಯಾಗಿದೆ. ಕೀರನ್ ಪೊಲಾರ್ಡ್ ನಾಯಕರಾಗಿ ಇದೀಗ ವೆಸ್ಟ್ ಇಂಡೀಸ್‌ನ ಸೀಮಿತ ಓವರ್‌ಗಳ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯನ್ನು ಪೊಲಾರ್ಡ್ ನಾಯಕತ್ವದ ವೆಸ್ಟ್‌ಇಂಡೀಸ್ ತಂಡ 3-0 ಅಂತರದಲ್ಲಿ ಜಯಿಸಿತ್ತು. ಆದರೆ ಟ್ವೆಂಟಿ -20 ಸರಣಿಯಲ್ಲಿ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. 2016ರಲ್ಲಿ ಟ್ವೆಂಟಿ-20 ವಿಶ್ವಕಪ್ ಗೆದ್ದ ನಂತರ ಇದು ವೆಸ್ಟ್‌ಇಂಡೀಸ್‌ನ ದಾಖಲೆ ಕಳಪೆಯಾಗಿದೆ. ವಿಂಡೀಸ್ ಆಡಿರುವ ಕೊನೆಯ 39 ಪಂದ್ಯಗಳ ಪೈಕಿ ಕೇವಲ 12 ಪಂದ್ಯಗಳನ್ನು ಜಯಿಸಿದೆ.

ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗೆ ಮುಂಚಿತವಾಗಿ ಆ ದಾಖಲೆಯನ್ನು ಸರಿಪಡಿಸುವ ಕೆಲಸವನ್ನು ಪೊಲಾರ್ಡ್ ಮಾಡಬೇಕಾಗಿದೆ. ಭಾರತ ವಿರುದ್ಧ ಸರಣಿಯು ವಿಂಡೀಸ್‌ಗೆ ಸವಾಲಾಗಿದೆ.  

ವಿಂಡೀಸ್ ತಂಡದಲ್ಲಿ ಐಪಿಎಲ್‌ನಲ್ಲಿ ಆಡಿರುವ ಅನುಭವ ಹೊಂದಿರುವ ಯುವ ಆಟಗಾರರಿದ್ದಾರೆ. ಎವಿನ್ ಲೆವಿಸ್, ಲೆಂಡ್ಲ್ ಸಿಮೊನ್ಸ್ ಮತ್ತು ಶಿಮ್ರಾನ್ ಹೆಟ್ಮ್ಮೆಯರ್, ನಿಕೋಲಸ್ ಪೂರನ್ ಮತ್ತು ಪೊಲಾರ್ಡ್ ಭಾರತದಲ್ಲಿ ಆಡಿರುವ ಅನುಭವಿಗಳು. ವೆಸ್ಟ್ ಇಂಡೀಸ್ ತಂಡದ ಸ್ಪಿನ್ ವಿಭಾಗವು ದುರ್ಬಲವಾಗಿದ್ದು, ಹೇಡನ್ ವಾಲ್ಶ್ ಮತ್ತು ಖಾರಿ ಪಿಯರ್ ತಂಡದಲ್ಲಿದ್ದಾರೆ.

ಭಾರತ: ವಿರಾಟ್ ಕೊಹ್ಲಿ (ನಾಯಕ ), ರೋಹಿತ್ ಶರ್ಮಾ (ಉಪನಾಯಕ ), ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್‌ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ದೀಪಕ್ ಚಹರ್, ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್, ಸಂಜು ಸ್ಯಾಮ್ಸನ್.

ವೆಸ್ಟ್ ಇಂಡೀಸ್: ಕೀರನ್ ಪೊಲಾರ್ಡ್ (ನಾಯಕ ), ಫ್ಯಾಬಿಯನ್ ಅಲೆನ್, ಶೆಲ್ಡನ್ ಕಾಟ್ರೆಲ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಕೀಮೋ ಪಾಲ್, ಬ್ರಾಂಡನ್ ಕಿಂಗ್, ಎವಿನ್ ಲೆವಿಸ್ , ಖಾರಿ ಪಿಯರ್, ನಿಕೋಲಸ್ ಪೂರನ್, ದಿನೇಶ್ ರಾಮ್ಡಿನ್, ಶೆರ್ಫೇನ್ ರುದರ್‌ಫೋರ್ಡ್, ಲೆಂಡ್ಲ್ ಸಿಮೊನ್ಸ್, ಕೆಸೆರಿಕ್ ವಿಲಿಯಮ್ಸ್ , ಹೇಡನ್ ವಾಲ್ಶ್ ಜೂನಿಯರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News