ತ್ರಿರಾಷ್ಟ್ರ ಹಾಕಿ ಟೂರ್ನಿ: ಭಾರತ-ಆಸ್ಡ್ರೇಲಿಯ ಜೂನಿಯರ್ ಮಹಿಳಾ ತಂಡಗಳ ಪಂದ್ಯ ಡ್ರಾ

Update: 2019-12-05 18:18 GMT

ಕ್ಯಾನ್‌ಬೆರ್ರಾ(ಆಸ್ಟ್ರೇಲಿಯ), ಡಿ.5: ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡ ತ್ರಿರಾಷ್ಟ್ರ ಟೂರ್ನಮೆಂಟ್‌ನಲ್ಲಿ ಗುರುವಾರ ಆಡಿದ ತನ್ನ ಎರಡನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ವಿರುದ್ಧ 1-1ರಿಂದ ಡ್ರಾ ಸಾಧಿಸಿದೆ.

ಆತಿಥೇಯ ತಂಡ 25ನೇ ನಿಮಿಷದಲ್ಲಿ ಸ್ಕೊನೆಲ್ ಕೊರ್ಟ್ನಿ 25ನೇ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ 1-0 ಮುನ್ನಡೆ ಸಾಧಿಸಿತು. ಆದರೆ, ಭಾರತ 52ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತು. ಗಗನ್‌ದೀಪ್ ಕೌರ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.

ಭಾರತ ತಂಡ ಮೊದಲ ಕ್ವಾರ್ಟರ್‌ನ್ನು ಆಕ್ರಮಣಕಾರಿ ಶೈಲಿಯಲ್ಲಿ ಆರಂಭಿಸಿತು. 10ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಆಸ್ಟ್ರೇಲಿಯದ ಡಿಫೆಂಡರ್‌ಗಳು ಭಾರತಕ್ಕೆ ಪ್ರತಿರೋಧ ಒಡ್ಡಿದರು. ಎರಡನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯ ಮೇಲುಗೈ ಸಾಧಿಸಿತು. 25ನೇ ನಿಮಿಷದಲ್ಲಿ ಗೋಲು ಗಳಿಸಿದ ಸ್ಕೊನೆಲ್ ಕೋರ್ಟ್ನಿ ಆಸ್ಟ್ರೇಲಿಯಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

ಭಾರತ ತಕ್ಷಣವೇ ಮರುಹೋರಾಟ ನೀಡಲು ಯತ್ನಿಸಿತು. ಆದರೆ, ಆಸ್ಟ್ರೇಲಿಯ ತಂಡ ಪ್ರವಾಸಿ ತಂಡಕ್ಕೆ ಸ್ಕೋರ್ ಸಮಬಲಗೊಳಿಸಲು ಅವಕಾಶ ನಿರಾಕರಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯ ತನ್ನ ಆಕ್ರಮಣಕಾರಿ ಪ್ರದರ್ಶನ ಮುಂದುವರಿಸಿ ಪೆನಾಲ್ಟಿಕಾರ್ನರ್ ಅವಕಾಶವನ್ನು ಗಿಟ್ಟಿಸಿಕೊಂಡಿತು. ಆದರೆ, ಭಾರತದ ಡಿಫೆಂಡರ್‌ಗಳು ಎದುರಾಳಿಗೆ 2-0 ಮುನ್ನಡೆ ನಿರಾಕರಿಸಿದರು.

ನಾಲ್ಕನೇ ಕ್ವಾರ್ಟರ್‌ನ ಆರಂಭದಲ್ಲಿ ಭಾರತ ಪೆನಾಲ್ಟಿಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಆಸ್ಟ್ರೇಲಿಯ ಇದಕ್ಕೆ ತಡೆಯೊಡ್ಡಿತು. ಕೊನೆಗೂ 52ನೇ ನಿಮಿಷದಲ್ಲಿ ಭಾರತ ಪೆನಾಲ್ಟಿ ಸ್ಟ್ರೋಕ್ ಅವಕಾಶ ಪಡೆದಿದ್ದು, ಗಗನ್‌ದೀಪ್ ಕೌರ್ ಯಾವುದೇ ಪ್ರಮಾದ ಎಸಗದೆ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News