ಉಪಚುನಾವಣೆಯಲ್ಲಿ ಹಿನ್ನೆಲೆಗೆ ಸರಿದ ಬಿಜೆಪಿಯ ಹಿಂದುತ್ವ

Update: 2019-12-06 05:46 GMT

ಅನರ್ಹರೆಂದು ಗುರುತಿಸಲ್ಪಟ್ಟ ಶಾಸಕರು ಮತ್ತು ಮತದಾರರ ಅರ್ಹತೆಯನ್ನು ಸ್ಪಷ್ಟಪಡಿಸಲಿರುವ ಉಪಚುನಾವಣೆ ಮುಕ್ತಾಯಗೊಂಡಿದೆ. ಒಂದು ರೀತಿಯಲ್ಲಿ ಮತದಾರರು ಮತ್ತು ಶಾಸಕರ ಫಲಿತಾಂಶ ಏಕಕಾಲದಲ್ಲಿ ಹೊರ ಬೀಳಲಿದೆ. ಇದೇ ಸಂದರ್ಭದಲ್ಲಿ ಚುನಾವಣೋತ್ತರ ಸಮೀಕ್ಷೆ ಬಿಜೆಪಿಯ ಪರವಾಲಿದೆ. ಸದ್ಯದ ರಾಜಕೀಯ ಸಂದರ್ಭದಲ್ಲಿ ಇದು ಅನಿರೀಕ್ಷಿತವೇನೂ ಅಲ್ಲ. ಯಾವ ಅಕ್ರಮ ದಾರಿಯನ್ನು ಬಳಸಿದರೂ ಸರಿಯೇ, ಅಧಿಕಾರ ಉಳಿಸಿಕೊಳ್ಳುವವನೇ ನಿಜವಾದ ಚಾಣಕ್ಯ ಎಂದು ನಂಬಿಕೊಂಡಿರುವ ದಿನಗಳಲ್ಲಿ, ಅನರ್ಹತೆಯೂ ಒಂದು ಅರ್ಹತೆಯೇ ಆಗಿ ಚುನಾವಣೆಯಲ್ಲಿ ಅವರ ಗೆಲುವಿಗೆ ಕಾರಣವಾಗಬಹುದು. ಸಾಧಾರಣವಾಗಿ ಅರ್ಹರ ಬಳಿ ರಾಜಕೀಯಕ್ಕೆ ಬೇಕಾಗಿರುವ ದುಡ್ಡು, ಕಾರ್ಯಕರ್ತರ ಪಡೆ ಕಡಿಮೆ ಇರುತ್ತದೆ. ಅನರ್ಹರೇ ಸದ್ಯದ ರಾಜಕೀಯಕ್ಕೆ ಹೆಚ್ಚು ಅರ್ಹರಾಗುವುದು ಈ ಕಾರಣದಿಂದ.

ಒಂದು ವೇಳೆ ಅನರ್ಹರು ಗೆದ್ದರೆ ಅದರಿಂದ ನಾವು ರಾಜಕಾರಣಿಗಳ ಅನರ್ಹತೆಯನ್ನು ಅನವಶ್ಯವಾಗಿ ಚರ್ಚಿಸದೆ, ಮತದಾರರ ಅರ್ಹತೆ, ಅನರ್ಹತೆಯ ಕುರಿತು ಚರ್ಚಿಸಬೇಕಾಗುತ್ತದೆ. ಅಂದರೆ ರಾಜಕಾರಣಿಗಳ ವಿಮರ್ಶೆ ಪಕ್ಕಕ್ಕಿಟ್ಟು ಆತ್ಮವಿಮರ್ಶೆಯನ್ನು ಈ ನಾಡಿನ ಪ್ರತಿ ಮತದಾರನೂ ನಡೆಸಬೇಕಾಗಿದೆ. ಕಳೆದ ಚುನಾವಣಾ ಪ್ರಚಾರವಂತೂ ಅತ್ಯಂತ ಅಶ್ಲೀಲವಾಗಿತ್ತು. ವೈಯಕ್ತಿಕ ನಿಂದನೆಗಳೂ ಕೇಳಿ ಬಂದವು. ಅಲ್ಲಲ್ಲಿ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆದವು. ಇದರ ಜೊತೆ ಜೊತೆಗೆ ‘ಹನಿ ಟ್ರಾಪ್’ ವೀಡಿಯೊ, ಆಡಿಯೊಗಳು ಚುನಾವಣೆಗೆ ವಿಶೇಷ ಕಳೆಯನ್ನು ತಂದುಕೊಟ್ಟವು. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪರವರೇ ಚುನಾವಣಾ ಪ್ರಚಾರವನ್ನು ಜಾತಿಗಳ ನಡುವಿನ ಜಗ್ಗಾಟವೆಂಬಂತೆ ವ್ಯಾಖ್ಯಾನಿಸಿದರು.

ಉಪಚುನಾವಣೆ ಯಡಿಯೂರಪ್ಪ ಅವರ ಪಾಲಿಗೆ ಮಾಡು ಮಡಿ ಹೋರಾಟವಾಗಿದೆ. ಅನರ್ಹ ಶಾಸಕರು ಸೋತದ್ದೇ ಆದರೆ, ಸರಕಾರ ಉರುಳುತ್ತದೆ. ಹಲವು ಕೋಟಿಗಳನ್ನು ಸುರಿದು ರಚಿಸಿದ ಸರಕಾರ ಒಂದೇ ಏಟಿಗೆ ಮಕಾಡೆ ಮಲಗಿ ಬಿಡುತ್ತದೆ. ಚುನಾವಣೆಯಲ್ಲಿ ಯಾವ ರೀತಿಯಲ್ಲಾದರೂ ಗೆಲ್ಲಲೇಬೇಕು ಎನ್ನುವ ಕಾರಣಕ್ಕಾಗಿ, ತನ್ನ ಸರಕಾರದ ಅಳಿವು ಉಳಿವು ‘ಕರ್ನಾಟಕದ ಲಿಂಗಾಯತರ ಅಳಿವು ಉಳಿವು’ ಎಂದು ಬಿಂಬಿಸಲು ಪ್ರಯತ್ನಿಸಿದರು. ಯಡಿಯೂರಪ್ಪ ಬಿಜೆಪಿಯ ನಾಯಕರಷ್ಟೇ ಆಗಿದ್ದಿದ್ದರೆ ಅವರನ್ನು ಟೀಕಿಸಬೇಕಾಗಿರಲಿಲ್ಲವೇನೋ. ಆದರೆ ಸದ್ಯಕ್ಕೆ ಅವರು ಒಂದು ರಾಜ್ಯದ ಮುಖ್ಯಮಂತ್ರಿ. ಹೀಗಿರುವಾಗ, ಒಂದು ನಿರ್ದಿಷ್ಟ ಸಮುದಾಯ ತನಗೇ ಮತಗಳನ್ನು ಹಾಕಬೇಕು, ಅವರು ಮತಗಳನ್ನು ಚಲಾಯಿಸದೇ ಇದ್ದರೆ ಅದು ತನಗೆ ಮಾಡುವ ಅವಮಾನ ಎಂದೆಲ್ಲ ಬಹಿರಂಗವಾಗಿ ಆಡುವುದು ಮುಖ್ಯಮಂತ್ರಿ ಸ್ಥಾನ ಕಾಪಾಡಬೇಕಾದ ಜಾತ್ಯತೀತ ನಿಲುವಿಗೆ ಅನ್ಯಾಯ ಬಗೆದಂತಾಗುತ್ತದೆ. ತನ್ನನ್ನು ತಾನ ವೀರಶೈವ ಲಿಂಗಾಯತರ ಮುಖ್ಯಮಂತ್ರಿಯೆಂದು ಬಿಂಬಿಸಿದಂತಾಗುತ್ತದೆ.

ಯಡಿಯೂರಪ್ಪ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘ವೀರಶೈವ ಲಿಂಗಾಯತರು ನನ್ನ ಕೈ ಬಿಡುವುದಿಲ್ಲ’’ ಎಂದಿದ್ದಾರೆ. ಮಗದೊಂದೆಡೆ ಅವರದೇ ಸಹೋದ್ಯೋಗಿಗಳು ‘‘ಯಡಿಯೂರಪ್ಪರನ್ನು ಬೆಂಬಲಿಸದೇ ಇದ್ದರೆ ವೀರಶೈವರು ಯಡಿಯೂರಪ್ಪ ಕೆನ್ನೆಗೆ ಬಾರಿಸಿದಂತೆ...’’ ಎಂದು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯವರ ಹೇಳಿಕೆಗಳು ಅವರಿಗೇ ತಿರುಗುಬಾಣವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ವೀರಶೈವರು ಕೈ ಬಿಡುವುದಿಲ್ಲ ಎನ್ನುವ ಮಾತು, ಪರೋಕ್ಷವಾಗಿ ಒಕ್ಕಲಿಗರು, ಕುರುಬರು ಸೇರಿದಂತೆ ಉಳಿದೆಲ್ಲ ಜಾತಿಯನ್ನು ಅವರು ವೀರಶೈವರ ವಿರುದ್ಧ ಎತ್ತಿ ಕಟ್ಟಿದಂತಾಗಿದೆ. ಜೊತೆಗೆ, ಉಳಿದೆಲ್ಲ ಜಾತಿಗಳು ನನ್ನ ಕೈ ಬಿಟ್ಟರೂ ಪರವಾಗಿಲ್ಲ ಎಂಬ ಋಣಾತ್ಮಕ ಸಂದೇಶವನ್ನು ಸಮಾಜಕ್ಕೆ ರವಾನಿಸಿದಂತೆಯೂ ಆಗಿದೆ.

ಎಲ್ಲಕ್ಕಿಂತಲೂ ಮುಖ್ಯವಾಗಿ ಬಿಜೆಪಿ ಯಾವ ‘ಹಿಂದುತ್ವ’ದ ಕುರಿತಂತೆ ಮಾತನಾಡುತ್ತಿದೆಯೋ ಅದರ ಟೊಳ್ಳುತನವನ್ನು ಕೂಡ ಯಡಿಯೂರಪ್ಪ ಬಯಲು ಮಾಡಿದ್ದಾರೆ. ಕನಿಷ್ಠ ಬಿಜೆಪಿಯ ಸಿದ್ಧಾಂತಕ್ಕೆ ಬದ್ಧರಾಗಿ ‘ಹಿಂದೂಗಳು ನನ್ನ ಕೈ ಬಿಡುವುದಿಲ್ಲ’ ಎಂಬ ಹೇಳಿಕೆಯನ್ನು ಕೊಟ್ಟಿದ್ದರೆ ಅದಕ್ಕಾದರೂ ಅರ್ಥವಿತ್ತು. ಹಿಂದೂಗಳೆಲ್ಲ ಒಂದು ಎನ್ನುತ್ತಲೇ, ಚುನಾವಣೆ ಸಂದರ್ಭದಲ್ಲಿ ‘ವೀರಶೈವರ ಮತಗಳಿಂದ ಗೆಲ್ಲುತ್ತೇನೆ’ ಎಂದು ಹೇಳಿಕೆ ನೀಡುವುದು ಪರೋಕ್ಷವಾಗಿ ಬಿಜೆಪಿಯ ಹಿಂದುತ್ವಕ್ಕೇ ಯಡಿಯೂರಪ್ಪ ಹಾಕಿದ ಸವಾಲಾಗಿದೆ. ವೀರಶೈವರನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾದರೆ ಅವರು ಹಿಂದೂ ಧರ್ಮೀಯರು ಅಲ್ಲ ಎನ್ನುವುದನ್ನು ಒಪ್ಪಿಕೊಂಡಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ವೀರಶೈವರಾಗಿರುವುದರಿಂದ ವೀರಶೈವರೆಲ್ಲ ಯಡಿಯೂರಪ್ಪರನ್ನು ಬೆಂಬಲಿಸಬೇಕು ಎಂದೂ ಈ ಹೇಳಿಕೆ ಆದೇಶಿಸುತ್ತದೆ. ಹಾಗಾದಲ್ಲಿ, ಉಳಿದ ಜಾತಿಗಳು ತಮ್ಮ ಜಾತಿ ಅಭ್ಯರ್ಥಿಗಷ್ಟೇ ಮತಗಳನ್ನುನೀಡಬೇಕು ಎಂದು ಒತ್ತಾಯಿಸಿದಂತೆಯೂ ಆಗಲಿಲ್ಲವೇ?

ಇದೇ ಸಂದರ್ಭದಲ್ಲಿ ಲಿಂಗಾಯತರು ತನ್ನನ್ನು ಬೆಂಬಲಿಸಬೇಕು ಎಂದು ಆಗ್ರಹಿಸುವ ಯಡಿಯೂರಪ್ಪ, ಪ್ರತಿಯಾಗಿ ಲಿಂಗಾಯತ ಧರ್ಮಕ್ಕೆ ಏನನ್ನು ನೀಡಿದ್ದಾರೆ ಎನ್ನುವುದರ ಕುರಿತಂತೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಬಸವಣ್ಣ, ಅಕ್ಕಮಹಾದೇವಿಯಾದಿಯಾಗಿ ಶರಣರು ಯಾವ ವೈದಿಕ ಸಿದ್ಧಾಂತವನ್ನು ವಿರೋಧಿಸಿ ಲಿಂಗಾಯತ ಧರ್ಮವನ್ನು ಕಟ್ಟಿದರೋ, ಆ ಧರ್ಮ ಕರ್ನಾಟಕದಲ್ಲಿ ಮತ್ತೆ ವೈದಿಕರ ನಿಯಂತ್ರಣಕ್ಕೊಳಗಾಗುವಲ್ಲಿ ಯಡಿಯೂರಪ್ಪರ ಪಾತ್ರವೂ ಇದೆ. ‘ಲಿಂಗಾಯತ ಸ್ವತಂತ್ರ ಧರ್ಮ’ವಾಗಬೇಕು ಎಂದು ಒತ್ತಾಯಿಸಿದಾಗ ಅದನ್ನು ಯಾವುದೇ ರೀತಿಯಲ್ಲಿ ಯಡಿಯೂರಪ್ಪ ಬೆಂಬಲಿಸಿಲ್ಲ. ಯಡಿಯೂರಪ್ಪ ಅವರನ್ನು ಬಳಸಿಕೊಂಡು ಆರೆಸ್ಸೆಸ್‌ನಂತಹ ಸಂಘಟನೆಗಳು ಲಿಂಗಾಯತ ಧರ್ಮದ ತತ್ವ, ಸಿದ್ಧಾಂತಗಳ ಜಾಗದಲ್ಲಿ ಮತ್ತೆ ವೈದಿಕ ಸಿದ್ಧಾಂತವನ್ನು ತುರುಕಿದೆ.

ಮನುವಾದಿ ರಾಜಕೀಯ ಲಿಂಗಾಯತ ಧರ್ಮವನ್ನು ಸಂಪೂರ್ಣ ಆಹುತಿ ತೆಗೆದುಕೊಳ್ಳಲು ಹೊಂಚು ಹಾಕಿ ಕುಳಿತಿದೆ. ಇದೇ ಹೊತ್ತಿನಲ್ಲಿ ಲಿಂಗಾಯತರ ಪ್ರತಿನಿಧಿಯಾಗಿ ಯಡಿಯೂರಪ್ಪ ಗುರುತಿಸಿಕೊಳ್ಳುತ್ತಿರುವ ಕಾರಣದಿಂದಲೇ, ಅವರನ್ನು ಬಿಜೆಪಿಯಿಂದ ಹೊರಹಾಕುವುದಕ್ಕೆ ವೈದಿಕ ಶಕ್ತಿಗಳು ಹೆದರುತ್ತಿವೆ. ಆದರೆ ಒಳಗೊಳಗೆ ಅವರನ್ನು ಸರ್ವನಾಶ ಮಾಡಲು ಸಂಚುಗಳನ್ನು ನಡೆಸುತ್ತಲೇ ಇದೆ ಎನ್ನುವುದು ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ. ಯಡಿಯೂರಪ್ಪ ಅವರನ್ನು ಕಾಯುತ್ತಿರುವುದು ಲಿಂಗಾಯತ ಸಮುದಾಯದ ಶಕ್ತಿಯೇ ಆಗಿದೆ. ಈ ನಿಟ್ಟಿನಲ್ಲಿ ಲಿಂಗಾಯತ ಧರ್ಮದ ತತ್ವ, ಸಿದ್ಧಾಂತ ಮನುವಾದಿ ಸಿದ್ಧಾಂತಕ್ಕೆ ಬಲಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಯಡಿಯೂರಪ್ಪರ ಮೇಲಿದೆ. ಆರೆಸ್ಸೆಸ್ ಪ್ರತಿಪಾದಿಸುವ ‘ಹಿಂದುತ್ವ’ ಬಸವಣ್ಣ ಪ್ರತಿಪಾದಿಸಿದ ಲಿಂಗಾಯತ ಧರ್ಮಕ್ಕೆ ವಿರುದ್ಧವಾದುದು ಎನ್ನುವುದನ್ನು ಯಡಿಯೂರಪ್ಪ ಅವರು ಈ ಇಳಿವಯಸ್ಸಿನಲ್ಲಾದರೂ ಅರ್ಥ ಮಾಡಿಕೊಳ್ಳಬೇಕು. ಹಿಂದುತ್ವ ಮತ್ತು ಲಿಂಗಾಯತ ಧರ್ಮ ಜೊತೆಯಾಗಿ ಸಾಗುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಅವರು ಬಹಿರಂಗವಾಗಿ ಒಪ್ಪಿಕೊಂಡು ಶರಣಚಳವಳಿಗೆ ಶರಣನೆನ್ನಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News