ಕಾರ್ಪೊರೇಶನ್ ಬ್ಯಾಂಕ್ ವಿಲೀನದ ವಿರುದ್ಧ ಡಿ.7ರಂದು ಧರಣಿ

Update: 2019-12-06 08:33 GMT

ಮಂಗಳೂರು, ಡಿ.6: ದ.ಕ. ಜಿಲ್ಲೆಯಲ್ಲೇ ಹುಟ್ಟಿ ಇಲ್ಲಿಯೇ ತನ್ನ ಕೇಂದ್ರ ಕಚೇರಿಯನ್ನು ಹೊಂದಿರುವ ಕಾರ್ಪೊರೇಶನ್ ಬ್ಯಾಂಕ್‌ನ ವಿಲೀನವನ್ನು ವಿರೋಧಿಸಿ ಬ್ಯಾಂಕಿನ ಎಲ್ಲಾ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಡಿ. 7ರಂದು ಧರಣಿ ಮುಷ್ಕರ ಹಮ್ಮಿಕೊಂಡಿವೆೆ. ಬೆಳಗ್ಗೆ 9 ಗಂಟೆಗೆ ಕಾರ್ಪೊರೇಶನ್ ಬ್ಯಾಂಕಿನ ಕೇಂದ್ರ ಕಚೇರಿ ಎದುರು ಧರಣಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿಂದು ಕಾರ್ಪೊರೇಶನ್ ಬ್ಯಾಂಕ್ ಸಂಘಟನೆಗಳ ಒಕ್ಕೂಟದ ಸಂಚಾಲಕ ವಿನ್ಸೆಂಟ್ ಡಿಸೋಜ ತಿಳಿಸಿದರು.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಐದು ಬ್ಯಾಂಕ್‌ಗಳು ಜನ್ಮ ತಾಳಿದ್ದು, ನಾಲ್ಕು ಬ್ಯಾಂಕುಗಳು ಸಾರ್ವಜನಿಕ ರಂಗದ ಅಗ್ರ ಬ್ಯಾಂಕ್‌ಗಳಾಗಿ ಗುರುತಿಸಿವೆ. ಕೇಂದ್ರ ಸರಕಾರ ಹಿಂದಿನ ವರ್ಷ ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿತ್ತು. ಇದೀಗ ಮತ್ತೆ ಕಾರ್ಪೊರೇಶನ್ ಬ್ಯಾಂಕ್ ವಿಲೀನಕ್ಕೆ ಮುಂದಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನದಿಂದ ಅನೇಕ ಶಾಖೆಗಳು ಮುಚ್ಚಲ್ಪಡುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಹವರ್ತಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯಲ್ಲಿ ದೇಶದ 6,950 ಶಾಖೆಗಳನ್ನು ವಿಲೀನಗೊಳಿಸಿದೆ. ಇದರಿಂದ ಗ್ರಾಹಕರು ಸಮಸ್ಯೆ ಅನುಭವಿಸುವಂತಾಗಿದೆ. ಬ್ಯಾಂಕ್ ಆಫ್ ಬರೋಡಾ ವಿಲೀನ ಪ್ರಕ್ರಿಯೆಯಲ್ಲಿ ಸುಮಾರು 900 ಶಾಖೆಗಳು ಮುಚ್ಚುವ ಅಂದಾಜು ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳು ದೇಶದ ಆರ್ಥಿಕತೆಯ ಬೆನ್ನೆಲುಬು. ಆಯಾ ಪ್ರದೇಶದ ಅನುಕೂಲತೆಗಳಿಗಾಗಿ ಅಲ್ಲಿನ ಪರಿಸರಕ್ಕೆ ತಕ್ಕಂತೆ ಈ ಬ್ಯಾಂಕುಗಳು ತಮ್ಮ ಸೇವೆಯನ್ನು ನೀಡಿ ಜನ ಮನ್ನಣೆ ಪಡೆದಿವೆ. ರಾಷ್ಟ್ರೀಕರಣಕ್ಕೆ ಮೊದಲು 8,262 ಇದ್ದ ಬ್ಯಾಂಕ್ ಶಾಖೆಗಳು ರಾಷ್ಟ್ರೀಕರಣದ 10 ವರ್ಷಗಳಲ್ಲಿ 30,303 ಆಗಿ ದೇಶದ ಉದ್ದಗಲಕ್ಕೂ ಹರಡಿವೆ. ಸದ್ಯ ರಾಷ್ಟ್ರೀಕೃತ ಬ್ಯಾಂಕುಗಳು ಲಕ್ಷಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿವೆ. ಇದೀಗ ವಿಲೀಕರಣದಿಂದಾಗಿ ಸಾವಿರಾರು ಶಾಖೆಗಳು ಈಗಾಗಲೇ ಮುಚ್ಚಲ್ಪಟ್ಟಿವೆ ಎಂದು ಅವರು ಹೇಳಿದರು.

ಕಾರ್ಪೊರೇಶನ್ ಬ್ಯಾಂಕ್ ಕರ್ನಾಟಕದಲ್ಲೇ 523 ಶಾಖೆಗಳನ್ನು ಹೊಂದಿವೆ. ಬ್ಯಾಂಕುಗಳ ಎನ್‌ಪಿಎ ಸರಿದೂಗಿಸಲು ಈ ವಿಲೀನ ಮಾಡಲಾಗುತ್ತಿದೆ. ಉತ್ತರ ಭಾರತದಲ್ಲಿ ಸಾಕಷ್ಟು ಬಂಡವಾಳ ಹೊಂದಿರುವುದರಿಂದ ದಕ್ಷಿಣದ ಬ್ಯಾಂಕ್‌ಗಳನ್ನು ಉತ್ತರ ಭಾರತದ ಬ್ಯಾಂಕ್‌ಗಳ ಜತೆ ವಿಲೀನ ಮಾಡಲಾಗುತ್ತಿದೆ ಎಂಬ ಉತ್ತರವನ್ನು ಕೇಂದ್ರ ಸರಕಾರದ ಸಚಿವರು ನೀಡುತ್ತಿದ್ದಾರೆ. ಆದರೆ ಇದು ಸರಕಾರಕ್ಕೆ ತಪ್ಪು ಉಪದೇಶ ಮಾಡಿದ್ದು, ಐಎಎಸ್ ಅಧಿಕಾರಿಗಳ ಲಾಬಿ ಎಂದು ಯೂನಿಯನ್ ನ ಪದಾಧಿಕಾರಿ ಸತೀಶ್ ಶೆಟ್ಟಿ ದೂರಿದರು.

ವಿಲೀನದಿಂದ ಯಾರಿಗೂ ಲಾಭವಾಗುವುದಿಲ್ಲ. ಬದಲಾಗಿ ಈಗಾಗಲೇ ನಿರುದ್ಯೋಗ ಸಮಸ್ಯೆಯನು ಎದುರಿಸುತ್ತಿರುವ ನಾವು ಮತ್ತಷ್ಟು ಉದ್ಯೋಗ ಕಡಿತವನ್ನು ಅನುಭವಿಸುತ್ತಿದ್ದೇವೆ, ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಯೂನಿಯನ್‌ನ ಪದಾಧಿಕಾರಿಗಳಾದ ಸುಧೀಂದ್ರ, ಶ್ರೀನಾಥ ಐತಾಳ್, ಆರ್.ಕೆ. ಬಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.


ಗಣ್ಯ ವ್ಯಕ್ತಿಗಳ ನಿಯೋಗದಿಂದ ಪ್ರಧಾನಿ ಭೇಟಿ

ಈಗಾಗಲೇ ಸಂಘದ ಪ್ರತಿನಿಧಿಗಳು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಂಸದರನ್ನು ಭೇಟಿ ಮಾಡಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದ್ದಾರೆ. ಇದೀಗ ಉಡುಪಿಯ ಪೇಜಾವರ ಶ್ರೀ ನೇತೃತ್ವದಲ್ಲಿ ಗಣ್ಯ ವ್ಯಕ್ತಿಗಳ ನಿಯೋಗವೊಂದು ಪ್ರಧಾನ ಮಂತ್ರಿಯನ್ನು ಭೇಟಿಯಾಗಲು ನಿರ್ಧರಿಸಲಾಗಿದೆ. ಇದಲ್ಲದೆ, ಡಿ.10ರಂದು ಹೊಸದಿಲ್ಲಿಯ ಸಂಸತ್ ಭವನದ ಎದುರು ವಿವಿಧ ಸಂಘಸಂಸ್ಥೆಗಳು ಸೇರಿ ಬೃಹತ್ ಪ್ರತಿಭಟನಾ ರ್ಯಾಲಿಗೆ ನಿರ್ಧರಿಸಲಾಗಿದೆ. ಜನಾಂದೋಲನ ರೀತಿಯಲ್ಲಿ ಪ್ರತಿಭಟಿಸಿ ಕರಾವಳಿಯ ಕರಾವಳಿಯ ಅಸ್ಮಿತೆಯನ್ನು ನಾಶವಾಗದಂತೆ ತಡೆಯುವ ಉದ್ದೇಶ ನಮ್ಮದಾಗಿದೆ ಎಂದು ವಿನ್ಸೆಂಟ್ ಡಿಸೋಜ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News