ಇಂಡಿಯಾನ ಆಸ್ಪತ್ರೆಯಿಂದ ಹೊಸ ಸಾಧನೆ : ರೋಗಿಗೆ ಯಶಸ್ವಿ ‘ತವಿ’ ಹೃದಯ ಶಸ್ತ್ರ ಚಿಕಿತ್ಸೆ

Update: 2019-12-06 15:39 GMT

ಮಂಗಳೂರು, ಡಿ. 6: ಹೃದಯ ಸಂಬಂಧಿಸಿ ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿ ಖ್ಯಾತಿ ಪಡೆದಿರುವ ಇಂಡಿಯಾನ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ಇದೀಗ ಹೃದ್ರೋಗ ಚಿಕಿತ್ಸೆಯಲ್ಲಿ ಇನ್ನೊಂದು ಸಾಧನೆ ಮಾಡಿದೆ.  ತಾಂತ್ರಿಕವಾಗಿ ವಿನೂತನ ವಿಧಾನವಾದ ಮಹಾಪಧಮನಿಯ ಕವಾಟದ ಬದಲಿ/ ಇಂಪ್ಲಾಂಟೇಶನ್ ‘ತವಿ (TAVI/TAVR)’ ಎಂಬ ಹೃದಯ ಶಸ್ತ್ರಚಿಕಿತ್ಸೆಯನ್ನು ರೋಗಿಯೊಬ್ಬರಿಗೆ ಯಶಸ್ವಿಯಾಗಿ ನಿರ್ವಹಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಯಶಸ್ವಿ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಆಸ್ಪತ್ರೆಯ ಪ್ರಧಾನ ಹೃದ್ರೋಗ ತಜ್ಞ ಆಗಿರುವ ಡಾ. ಯೂಸುಫ್ ಕುಂಬ್ಳೆ, ಮಡಿಕೇರಿಯ ಸ್ಯಾಮ್ಯುವೆಲ್ ಡೇನಿಯರ್ ಎಂಬ ರೋಗಿಗೆ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ರೋಗಿಯು ಸದ್ಯ ಗುಣಮುಖರಾಗಿದ್ದು, ನಾಳೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಹೇಳಿದರು.

ಡಾ. ಯೂಸುಫ್ ಕುಂಬ್ಳೆ ಅವರು ಈ ಯಶಸ್ವಿ ಚಿಕಿತ್ಸೆಯನ್ನು ನಡೆಸಿದ್ದು ಆಸ್ಪತ್ರೆಯ ಹೃದಯ ಸಂಬಂಧಿ ಚಿಕಿತ್ಸೆ ನೀಡುವ ತಜ್ಞರ ತಂಡ ಅವರಿಗೆ ಸಹಕರಿಸಿದೆ. 

ಈ ಉನ್ನತ ಚಿಕಿತ್ಸಾ ವಿಧಾನವಾದ ‘ತವಿ’ ವ್ಯವಸ್ಥೆಯನ್ನು ದೇಶದ ಕೆಲವು ಉನ್ನತ ಆಸ್ಪತ್ರೆಗಳು ಕಳೆದ ಎರಡು ವರ್ಷಗಳಿಂದೀಚೆಗೆ ಅಳವಡಿಸಿಕೊಂಡಿವೆ. ಸ್ಯಾಮುವೆಲ್ ಡೇನಿಯರ್‌ರವರಿಗೆ ಹೃದಯ ಸಂಬಂಧಿ ಚಿಕಿತ್ಸೆಗಾಗಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಲಾಗಿತ್ತು. ಉಸಿರಾಟದ ತೊಂದರೆಯೊಂದಿಗೆ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅವರು ಇಂಡಿಯಾನ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಅವರಿಗೆ ಶಸ್ತ್ರ ಚಿಕಿತ್ಸೆಯ ಭಯವಿಲ್ಲದೆ ಕೇವಲ ಕಿರಿದಾದ ರಂಧ್ರವನ್ನು ಮಾಡಿ ಕವಾಟವನ್ನು ಅಳವಡಿಸುವ 'ತವಿ' ಚಿಕಿತ್ಸೆಯ ಬಗ್ಗೆ ರೋಗಿಗೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಅವರು ಒಪ್ಪಿಕೊಂಡು ಈ ಚಿಕಿತ್ಸೆ ನಡೆಸಲಾಯಿತು ಎಂದು ಹೇಳಿದರು.

ಸಾಮಾನ್ಯಾಗಿ ಮಹಾಪಧಮನಿಯ ಸ್ಟೆನೋಸಿಸ್ ಚಿಕಿತ್ಸೆಗೆ ಕವಾಟ ಬದಲಿಸಲು ತೆರೆದ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಆದರೆ ವಯಸ್ಸಾದ ರೋಗಿಗಳು ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದು ಬಹುತೇಕ ಪ್ರಕರಣಗಳಲ್ಲಿ ಅಸಾಧ್ಯವಾಗಿರುತ್ತದೆ. 'ತವಿ' ಅಂತಹ ರೋಗಿಗಳಿಗೆ ವರದಾನ. ಕನಿಷ್ಠ ನೋವಿನ ವಿಧಾನದಲ್ಲಿ ಹಾನಿಗೊಳಗಾದ ಕವಾಟವನ್ನು ಆಂಜಿಯೋಗ್ರಾಮ್‌ಗೆ ಒಳಪಡಿಸುವಂತೆ ಕ್ಯಾತಿಟರ್ ಬಳಸಿ ಕೀ ಹೋಲ್ ವಿಧಾನದ ಮೂಲಕ ಹೊಸ 26 ಎಂಎಂ ಕವಾಟದಿಂದ ಬದಲಿಸಲಾಗುತ್ತದೆ. ಒಳ ಸೇರಿಸುವ ಸಮಯದಲ್ಲಿ ಕವಾಟವು ಮುಚ್ಚಿರುತ್ತದೆ ಮತ್ತು ಬೆಚ್ಚಗಿನ ರಕ್ತವು ಅದರ ಮೂಲಕ ಹರಿಯುವಾಗ ತೆರೆಯುತ್ತದೆ.  ಈ ಚಿಕಿತ್ಸೆ ನೀಡಲು ಎರಡು ಗಂಟೆಗಳ ಸಮಯ ತಗಲುತ್ತದೆ. ಆರು ಗಂಟೆಗಳ ಅವಧಿಯಲ್ಲಿ ರೋಗಿಯನ್ನು ಐಸಿಯುನಿಂದ ಹೊರ ತರಲಾಗುತ್ತದೆ ಎಂದು ಚಿಕಿತ್ಸೆಯ ವಿಧಾನವನ್ನು ಡಾ. ಯೂಸುಫ್ ಕುಂಬ್ಳೆ ವಿವರಿಸಿದರು.

ಹತ್ತು ವರ್ಷಗಳ ನಂತರ ಬದಲಾದ ಕವಾಟ ಕ್ಷೀಣಿಸಿದರೆ, ಅದನ್ನು ಹೊಸ ಕವಾಟದಿಂದ ಬದಲಿಸಬಹುದಾಗಿದೆ. ಹೊರ ರಾಷ್ಟ್ರಗಳಿಂದ ಈ ಕವಾಟವನ್ನು ಆಮದು ಮಾಡಿಕೊಂಡಲ್ಲಿ ಸುಮಾರು 25 ಲಕ್ಷ ರೂ.ಗಳನ್ನು ಈ ಕವಾಟಕ್ಕೆ ವೆಚ್ಚ ಮಾಡಬೇಕಾಗುತ್ತದೆ. ಭಾರತದಲ್ಲಿಯೂ  ಈ ಕವಾಟ 12 ಲಕ್ಷ ರೂ.ಗಳಲ್ಲಿ ಲಭ್ಯವಿದ್ದು, ಸುಮಾರು 15 ಲಕ್ಷ ರೂ. ಚಿಕಿತ್ಸೆಗೆ ವೆಚ್ಚವಾಗುತ್ತದೆ ಎಂದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ 'ತವಿ' ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿ ಸ್ಯಾಮ್ಯುವೆಲ್ ಡೇನಿಯಲ್ ಮಾತನಾಡಿ, ತಾನೀಗ ಚೇತರಿಸಿಕೊಂಡಿದ್ದು, ಈ ಚಿಕಿತ್ಸೆ ತೃಪ್ತಿ ನೀಡಿದೆ ಎಂದರು.

ಗೋಷ್ಠಿಯಲ್ಲಿ ಡಾ. ಅಲಿ ಕುಂಬ್ಳೆ, ಡಾ. ಮದನ್, ಡಾ. ಮನ್ಸೂರ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News