ಆರ್ಥಿಕ ಹಿಂಜರಿತದ ಗಮನ ಬೇರೆಡೆಗೆ ಸೆಳೆಯಲು ಪೌರತ್ವ ಮಸೂದೆ, ಎನ್‌ಆರ್‌ಸಿ: ಮಮತಾ ಬ್ಯಾನರ್ಜಿ

Update: 2019-12-19 06:24 GMT

ಕೋಲ್ಕತಾ, ಡಿ.6: ಪೌರತ್ವ (ತಿದ್ದುಪಡಿ) ಮಸೂದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಇವನ್ನು ಟಿಎಂಸಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

“ಪೌರತ್ವವನ್ನು ಎಲ್ಲಾ ಸಮುದಾಯದವರಿಗೂ ನೀಡುವುದಾದರೆ ನಮ್ಮ ಒಪ್ಪಿಗೆಯಿದೆ. ಆದರೆ ಧರ್ಮದ ಆಧಾರದಲ್ಲಿ ನೀಡುವುದಾದರೆ ಅದನ್ನು ವಿರೋಧಿಸಿ ಹೋರಾಟ ನಡೆಸಲಿದ್ದೇವೆ” ಎಂದು ಬ್ಯಾನರ್ಜಿ ಹೇಳಿದ್ದಾರೆ. ದೇಶವನ್ನು ಕಂಗೆಡಿಸಿರುವ ಆರ್ಥಿಕ ಹಿಂಜರಿತದ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯಲು ಎನ್‌ಆರ್‌ಸಿ ಮತ್ತು ಪೌರತ್ವ ಮಸೂದೆಯ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಿಮಗೆ ಬಹುಮತ ಇರುವುದರಿಂದ ಪೌರತ್ವ ತಿದ್ದುಪಡಿ ಮಸೂದೆಗೆ ಬಿಜೆಪಿ ಅನುಮೋದನೆ ಪಡೆದುಕೊಳ್ಳಬಹುದು. ಆದರೆ ತಮ್ಮ ಪಕ್ಷ ಮಾತ್ರ ಇದನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದವರು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎಗೆ ಲೋಕಸಭೆಯಲ್ಲಿ ಬಹುಮತವಿದ್ದರೂ ರಾಜ್ಯಸಭೆಯಲ್ಲಿ ಬಹುಮತವಿಲ್ಲ. ಮುಂದಿನ ಸೋಮವಾರದಿಂದ ಶುಕ್ರವಾರದವರೆಗೆ ಪಕ್ಷದ ಎಲ್ಲಾ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರೂ ಸದನದಲ್ಲಿ ಹಾಜರಿರ ಬೇಕೆಂದು ಸೂಚಿಸಿ ಟಿಎಂಸಿ ವ್ಹಿಪ್ ಹೊರಡಿಸಿದೆ. ಟಿಎಂಸಿ ಲೋಕಸಭೆಯಲ್ಲಿ 7 ಮತ್ತು ರಾಜ್ಯಸಭೆಯಲ್ಲಿ 13 ಸದಸ್ಯರನ್ನು ಹೊಂದಿದೆ. ಈಗ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಮಸೂದೆಗೆ ವಿಪಕ್ಷಗಳು ಹಾಗೂ ಈಶಾನ್ಯ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News